Monday, October 13, 2008

ಪಕ್ಕದ ಮನೆ ಗೆಳತಿಗೆ....

ಪಕ್ಕದ ಮನೆ ಗೆಳತಿ,

ಇಲ್ಲಿ ನಗರವೆಂಬ ನಗರ ಮೆಲ್ಲಗೆ ಮೈ ಮುರಿದು ಏಳುತ್ತಿದೆ. ಬೆಚ್ಚನೆ ಮಲಗಿದ್ದ ರಸ್ತೆಯಲ್ಲೂ ಒಂದು ಹಿತ ಆಲಸ್ಯ.ಹಾಸಿಗೆಯಿಂದ ಮೇಲೆದ್ದವನ ಕಣ್ಣ ಮುಂದೆ ನಿನ್ನದೇ ಚಿತ್ರಣ.ರಾತ್ರಿಯಷ್ಟೇ ನಾವಿಬ್ಬರೂ ಜಗುಲಿಯಲ್ಲಿ ಕುಳಿತು ಮಾತನಾಡಿದ ಉಸಿರಿನ ಉಸಿರು ನನ್ನ ಕಿವಿಯಲ್ಲಿ ಹಾಗೆಯೇ ಇದೆ.ಮನೆಯ ಹಿಂದಿನ ಪಾರಿಜಾತ ಗಿಡದ ಹೂವಿನ ಘಮ.ನೀನು ಶುಬ್ಬ್ರ ಮುಂಜಾವಿನಲ್ಲಿ ಬಂದು ಪೂಜೆಗೆಂದು ಆಯ್ದು ಹೋದ ಹೂವು-ಇಲ್ಲಿ ನಿನ್ನ ಹೆಜ್ಜೆ ಗುರುತು, ನನ್ನ ಇಷ್ಟಗಲದ ಹಣೆಯ ಮೇಲೆ ಇಟ್ಟು ಹೋದ ಸಕ್ಕರೆ ಬಿಳುಪಿನ ಸಿಹಿ ಮುತ್ತು !!

ನನ್ನ ದಿನ ಪ್ರಾರಂಭವಾಗುವುದೇ ಹೀಗೆ.ನಾನಿಲ್ಲಿ ಏಳುವ ಹೊತ್ತಿಗಾಗಲೇ,ನೀನು ಬೃಂದಾವನದ ತುಳಸಿಗೆ ಪೂಜೆ ಮಾಡುತ್ತಾ ನಿಂತಿರುತ್ತೀಯ.ನಿನ್ನ ಕೈಲಿರುವ ಉದಿನ ಕಡ್ಡಿಗೂ ನಿನ್ನ ತಿಳಿ ಸೌಂದರ್ಯದ ಘಮ! ನಿದ್ದೆ ಕಣ್ಣಲ್ಲೇ ಬಂದು ನಿಂತವನನ್ನು ನೋಡಿ ಸುಮ್ಮನೆ ನಿನ್ನ ಕಣ್ಣಲ್ಲಿ ಒಂದು ಹುಸಿ ನಗು.
ನನ್ನ ಗಂಟಲಲ್ಲಿ ಮಾತೇ ಹೊರಡುವುದಿಲ್ಲ.ನಿನ್ನ ಆ ಜರಿ ಲಂಗ,ಹಣೆಯಲ್ಲಿನ ಆ ಕುಂಕುಮ,ಹಾಲಿನಲ್ಲಿ ಅದ್ದಿದಂತ ಆ ಮುದ್ದು ಗಲ್ಲ,ಆ ಪುಟ್ಟ ತುಟಿಗಳು ನಿನಗೆ ಎಷ್ಟು ಒಪ್ಪುತ್ತದೆ ಗೊತ್ತ?
ಅಡಿಗೆ ಮನೆಯಿಂದ ಅಮ್ಮ, "ಆಫೀಸಿಗೆ ಹೊತ್ತಾಯಿತು ಸ್ನಾನಕ್ಕೆ ಹೊರಡು...." ಅನ್ನುವ ವರೆಗೂ ನನ್ನ ಕಣ್ಣಲ್ಲಿ ಇರುವವವಳು ನೀನೆ!

ನಾನು ಮತ್ತೆ ಮನೆಗೆ ಬರುವ ಹೊತ್ತಿಗಾಗಲೇ ನೀನು ನಿನ್ನ ಕಾಲೇಜಿನ ಪುಸ್ತಕಗಳಲ್ಲಿ ಕಳೆದುಹೊಗಿರುತ್ತೀಯ.ಮತ್ತೆ ನನ್ನ ಮನಸ್ಸು,ನೀನು ಯಾವಾಗ ಒಂದು ನಗೆ ಬೀರುತ್ತೀಯೋ ಎಂದು ತುಡಿಯುತ್ತಿರುತ್ತದೆ.ನಿನ್ನ ಒಂದು ಕಾಲ್ಗೆಜ್ಜೆಯ ಗೆಜ್ಜೆ ನನ್ನ ಬಳಿ ಇದೆ.ಆ ಗೆಜ್ಜೆಯಲ್ಲೂ ನಿನ್ನ ಹೆಜ್ಜೆಯದೇ ಸಪ್ಪಳ.
ಒಂದೇ ರಸ್ತೆಯ ಎರಡು ಪುಟ್ಟ ಪುಟ್ಟ ಮಕ್ಕಳು ಬೆಳೆದು ದೊಡ್ಡವರಾದ ಕಥೆ-ನಮ್ಮಿಬ್ಬರ ಹೆಸರು!

ಆಗೆಲ್ಲ ನಿನ್ನ ಕರೆಗೆ ಒಗೊಡುತ್ತಿದ್ದವನು, ನಿನ್ನ ಆಟಕ್ಕೆ ಜೊತೆಯಾದವನು , ನಿನ್ನ ಬೇಸರಕ್ಕೆ ಕಿವಿಯಾದವನು, ಮನೆಯ ಹಿತ್ತಲಲ್ಲಿ ಮೂಡಿದ ನಿನ್ನ ಹೆಜ್ಜೆ ಗುರುತಿಗೆ ಬೆರಗಾಗುವವನು, ನಿನ್ನ ಆ ಒಂದು ಸಣ್ಣ ಖುಷಿಗಾಗಿ ದಿನವೆಲ್ಲ ಹಪ ಹಪಿಸುವವನು, ನಿಷ್ಕಾರಣವಾಗಿ ನಿನ್ನ ಪ್ರೀತಿಸುವವನು, ನಾನಲ್ಲದೇ ಇನ್ನ್ಯಾರೆ ಗೆಳತಿ?!

-ನಿನ್ನವನು.

No comments: