Wednesday, November 4, 2009

ನನ್ನೊಳಗೆ ಬೆಳಗುವುದು ನಿನ್ನ ಸ್ನೇಹದ ತಿಳಿ ನೀಲಾಂಜನ ಮಾತ್ರ!


ಅನುರೂಪದ ಗೆಳತಿ,
ನಗರದೊಳಗೆ ಹಬ್ಬದ ದಿಬ್ಬಣವೆಲ್ಲ ಮುಗಿದು ಸಣ್ಣಗೆ ನಿದಿರೆಗೆ ಜಾರುತ್ತಿದೆ. ಮನೆಯ ಮುಂದಿನ ಹೊಸ್ತಿಲ ಬಳಿಯಿರುವ ದೀಪಕ್ಕೆ ಸಣ್ಣ ಮಂಪರು. ನನ್ನೊಳಗೆ ನೂರು ಮತಾಪಿನ ಬೆಳಕು ಹಾಗು ನೆನಪಿನ ನೆರಳು-ಬೆಳಕಿನಾಟ! ಬೀದಿಯ ತುದಿಯಲ್ಲಿ ಯಾರೋ ಹೊಡೆದ ಪಟಾಕಿಯ ಸದ್ದು ಮೆಲ್ಲನೆ ಕ್ಷೀಣಿಸುತ್ತದೆ. ನೀನು ಮಾತ್ರ ನನ್ನೊಳಗೆ ಮಾಯದ ಗಾಯದಂತೆ ಉಲ್ಬಣಗೊಳ್ಳುತ್ತೀಯ! ನನಗೆ ಗೊತ್ತಿಲ್ಲ, ನಮ್ಮಿಬ್ಬರ ಇಪ್ಪತ್ತು ವರ್ಷಗಳ ಸಾಂಗತ್ಯದಲ್ಲಿ ನೀನು ನನ್ನೂಡನಿದ್ದರೂ, ತೀರ ನನಗೆ ನಾನೇ ಏಕಾಂಗಿಯಾಗಿ ಭಾಸವಾಗಿದ್ದು perhaps ಇದೆ ಮೊದಲು. ಇನ್ನು ನನ್ನ ಏಕಾಂಗಿತನವನ್ನು ಹವ್ಯಾಸವಾಗಿ, ರೂಢಿಗಳಾಗಿ, ದಿನಚರಿಗಳಾಗಿ ಅಭ್ಯಯಿಸಿಕೊಳ್ಳಬೇಕು. ಹಬ್ಬ ಮುಗಿದ ಮೇಲೆ ನನ್ನೊಳಗೆ ಇರುಳು ಸುರಿಯುವಂತೆ...

हे अँधेरा.....
झला दे मुझे...!!

ಮನಸ್ಸು ತೀರ nostalgic ಆಗಿ, retrospective ಆಗಿ behave ಮಾಡತ್ತೆ. ನನ್ನ ಬಳಿ ಉತ್ತರಗಳಿಲ್ಲ. ನಿನ್ನೊಡನೆ ಬಾಲ್ಯದಿಂದಲೂ ಆಟವಾಡುತ್ತ ಬೆಳೆದೆ ಎಂಬ ಕಾರಣಕ್ಕೋ ಏನೋ, ನೀನು ತೀರ ನನ್ನ ಪ್ರಾಣವೇ ಎಂಬಂತಾಗಿ ಹೋದೆ. ಅದೇನು ನನ್ನ ವೀಕ್ನೆಸ್ಸುಗಳೋ ಏನೋ ನನಗೆ ಗೊತ್ತಿಲ್ಲ, ಅಥವಾ ಈ ಹುಡುಗರ ಮನಸ್ಸೇ ಹೀಗೋ?! ನಾನು ಕಣ್ಣು ತೆರೆದರೆ ಕಾಣುತ್ತಿದ್ದಿದ್ದು ನಿನ್ನ ಮನೆಯ ಕಿಟಕಿ. ಮೇರೆ ಸಾಮನೇ ವಾಲೆ ಕಿಟಕಿಯಲಿ ಇದ್ದ ಚಾಂದ್ ಕ ತುಕುಡ..ಅದು ನೀನೆ! ನಿನಗೆ ಬೆಂಡೆಕಾಯಿ ಎಂದರೆ ಅಲರ್ಜಿ. ನಿನಗೆ ನಾನಿಟ್ಟ ಹೆಸರು 'ಬೆಂಡೆ ಕಾಯ್'.
ಶಾಲೆಯ ದಾರಿಯುದ್ದಕ್ಕೂ ನಡೆಯುವಾಗ ಮೂಡುತ್ತಿದ್ದ ನಿನ್ನ ಗೆಜ್ಜೆ ಸದ್ದಿನ ದನಿ ನನ್ನ ದನಿ ಪೆಟ್ಟಿಗೆಯೊಳಗಿರಬಹುದು! ಈಗಲೂ ನಿನ್ನ ಕೂಗಿ ಕರೆದರೆ ಅದೇ ಗೆಜ್ಜೆಯ ಸದ್ದು! ನಿನ್ನ ಕಾಲ್ಗೆಜ್ಜೆಗಳೆಂದರೆ ತುಂಬಾ ಇಷ್ಟವಾಗಿ ಬಿಟ್ಟಿದ್ದವು. ನೀನೆಷ್ಟು ಪ್ರಿಯವಾಗಿರಬೇಕು ಹೇಳು!
ಎಲ್ಲ ನೆನಪುಗಳೂ ಬೆಚ್ಚಗೆ ಇಟ್ಟುಕೊಂಡಿರುವೆ...ಕರಗದಂತೆ!

ಬಾಲ್ಯದಿಂದ ನಿನ್ನೊಡನೆ ಇದ್ದುಬಿಟ್ಟೆ ಎಂಬ ಸಲುಗೆಯೋ ಏನೋ, ಊರೊಳಗಿನ ಹಿನ್ನೀರಿನ ದೇಗುಲದ ಬಳಿ ಕುಳಿತು ಮಾತನಾಡುತ್ತಿದ್ದರೆ, ಪ್ರಪಂಚದ ಜನಸಂಖ್ಯೆ ಕೇವಲ ಎರಡು, ನಾನು-ನೀನು! ನಿನಗೆ ಮಾತನಾಡಲಿಕ್ಕೆ ನೂರು ವಿಷಯಗಳಿದ್ದವು, ಆದರೆ ನನಗಿದಿದ್ದು ಎರಡೇ ಕಿವಿ! ನಿನ್ನ ತಿಳಿಗೆನ್ನೆಯನ್ನು ನೋಡುತ್ತಾ ನೋಡುತ್ತಾ ಮೋಹದಲ್ಲಿ ಬಿದ್ದು ಬಿಡುತ್ತೇನ ಅನ್ನಿಸುತ್ತಿತ್ತು. ಮನಸ್ಸು ಮಾಡುವ ಚಡಪಡಿಕೆಗಳೇ ಹೀಗೆ. ಎಲ್ಲ ಹುಚ್ಚುತನಗಳ ಸಂಕಲಿಸಿದರೆ ನಾನಾಗುತ್ತೀನ? ಅದು ಪ್ರೀತಿಯೆನ್ನುತ್ತಿರಲಿಲ್ಲ, ನೀನು ನನ್ನೊಡನೆ ಇದ್ದೆ ಇರುತ್ತೀಯ ಎಂಬ ಹುಚ್ಚು ನಂಬಿಕೆ ಇತ್ತು. ನಮ್ಮ ಸ್ನೇಹ ಕೇವಲ ಸ್ನೇಹವಾಗಿರದೆ ಮತ್ತೇನೋ ಆಗಿತ್ತು. ಆ ಬಂಧಕ್ಕೆ ನನ್ನ ಬಳಿ ಹೆಸರಿಲ್ಲ ಗೆಳತಿ. ಒಲುಮೆಯೆನ್ನು, ಸ್ನೇಹವೆನ್ನು, ಸಲುಗೆಯೆನ್ನು. ಮತ್ತೇನೋ ಅದು! ನೀನಾದರೂ ಯಾವ ಹೆಸರು ಕೊಡುತ್ತಿದ್ದೆ ಹೇಳು?!

ಮುಂದಿನ ಫಾಲ್ಗುಣ ಕಳೆದರೆ ನಿನ್ನ ಮದುವೆಯ ಸುದ್ಧಿ. ಸಂತಸ ಪಡಲಿಕ್ಕೆ ಬೇರೇನು ಕಾರಣ ಬೇಕು? ಇಷ್ಟು ವರ್ಷಗಳ ಒಡನಾಟವೋ ಏನೋ, ನೀನು ನನ್ನ ಭಾಗವೇ ಆಗಿಬಿಟ್ಟಿದ್ದೆ. ನಾವಿಬ್ಬರೂ ಒಟ್ಟಿಗೆ ಆಚರಿಸಿದ ಕೊನೆಯ ದೀಪಾವಳಿಯೋ ಏನೋ? ನೂರು ದುಃಖಗಳು ಉಮ್ಮಳಿಸಿ ಬರುತ್ತದೆ, But,the life has to move on. ನಮ್ಮ ಒಡನಾಟ , ಆ ಬಾಲ್ಯ, ನಿನ್ನ ಕಾಲ್ಗೆಜ್ಜೆ, ಮುಂಗುರುಳು, ನಿನ್ನ ಕೆನ್ನೆ, ನನ್ನ ಮೋಹ ಎಲ್ಲವೂ Black and white ಫ್ರೇಮಿನಲ್ಲಿ ಮಂದಗತಿಯಲ್ಲಿ ಚಲಿಸುವ ಹಾಗೆ ಭಾಸವಾಗುತ್ತದೆ. ಎಂದೋ ಮುಗಿಯುವ ಸುಖಕ್ಕೆ ಮನಸ್ಸು ಇಂದೇ ಕೊರಗುತ್ತದೆ. ನಾನು ನಿನ್ನ ಗೆಳೆಯ ಎಂಬ ಕಾರಣಕ್ಕೆ ಸಂತಸಪಡಬೇಕೋ ಅಥವ ಕೇವಲ ನಿನ್ನ ಗೆಳೆಯನಾಗಿ ಮಾತ್ರ ಇರಬಲ್ಲೆ ಎಂಬ ಕಾರಣಕ್ಕೆ ದುಃಖಿಸಬೇಕೋ ತಿಳಿಯುತ್ತಿಲ್ಲ! ಪ್ರತಿ ದುಖದಲ್ಲೂ ಸಂತಸವಿರುವಂತೆ, ಪ್ರತಿ ಸಂತಸದಲ್ಲೂ ದುಖವಿರುತ್ತದಂತೆ, ಹೌದ? ಗೊತ್ತಿಲ್ಲ. ನಾಳೆ ಆ ಹಿನ್ನೀರಿನ ದೇಗುಲದ ಬಳಿ ಮಾತನಾಡಲು ನೀನಿರುವುದಿಲ್ಲ, ಕಾರ್ತಿಕದ ದೀಪಾವಳಿಗೆ ಸಂಬ್ರಮಿಸಲು ನೀನಿರುವುದಿಲ್ಲ, ಆದರೆ ನನ್ನೊಳಗೆ ಬೆಳಗುವುದು ನಿನ್ನ ಸ್ನೇಹದ ತಿಳಿ ನೀಲಾಂಜನ ಮಾತ್ರ!

- ಪ್ರೀತಿಯ ಗೆಳೆಯ.