Thursday, April 28, 2011

ಬದುಕಲಿ ಒಲವಿನಂತೆ ವಿರಹವೂ ಬೇಕು ನನ್ನ ತಿಳಿಮೊಗದ ಶ್ರೀಕಾಂತಿ..!




ಪುನರ್ವಸು,

ಮತ್ತೆ ಗಾಳಿ ಬೀಸುತಿದೆ. ದೂರದ ಅರಬ್ಬೀ ಸಮುದ್ರದ ಮೇಲೆ ನಿರ್ಮಾನುಶೀ ಮಳೆಯಾಗುತ್ತಿರಬಹುದು. ನಾನಿಲ್ಲಿ ಅಮ್ಮ ಎಂದಿಗೂ ಹಾಡಿಕೊಳ್ಳುತ್ತಿದೆ ' ಕೃಷ್ಣ ಎನಬಾರದೇ..." ಹಾಡನ್ನು ಗುನುಗಿಕೊಳ್ಳುತ್ತಿದ್ದೇನೆ. ನೀನು ಈ ರಜೆಯಲ್ಲಿ ನನ್ನೊಬ್ಬನನ್ನೇ ಒಬ್ಬಂಟಿಯಾಗಿ ಬಿಟ್ಟು ಅಲ್ಲಿ ಅಜ್ಜಿಯ ಮನೆಗೆ ಹೋದಾಗಿನಿಂದ ಈ ಮನಸಿನ ಗೋದಾಮಿನ ತುಂಬಾ ನಿನದೆ ನೆನಪು. ಬೆಳಗೆಲ್ಲ ಅಮಾನುಷವಾಗಿ ಸುರಿದ ಬಿಸಿಲು ಆ ಬೆಟ್ಟದ ಮರೆಯಲಿ ಕುಳಿತು ಬೀಸಣಿಕೆ ಬೀಸಿಕೊಳ್ಳುತ್ತಿದೆಯಂತೆ, ಮುಗಿಲು ಇನ್ನೂ ಕೆಂಡ ಸಂಪಿಗೆ. ನಾನು ಆಫೀಸಿನಿಂದ ಬಂದೊಡನೆ ಮಾಡುವ ಒಂದೇ ಕೆಲಸ ಅಂದರೆ, ಮನೆಯ ಮಾಳಿಗೆಯನು ಹತ್ತಿ ಹರಿದ ಚತ್ರಿಯ ನಡುವೆ ಮಿನುಗುವ ಚುಕ್ಕಿಗಳನು ಎಣಿಸುವುದು. ಅದೋ, ಚೌಕಾಕಾರವಾಗಿ ಕಾಣುತ್ತದಲ್ಲ ಆ ನಕ್ಷತ್ರದ ರಾಶಿ, ಅದು ನೀನು, ಪುನರ್ವಸು!

ಅಕ್ಕ ಹೇಳಿದಳು, ನೀನು ಹೋಗುವ ಮುನ್ನ ನನ್ನ ಕೇಳಿ ಹೋದೆಯಂತೆ. ಕೊಂಚ ನಿಧಾನಿಸಿ ಹೋಗಿದ್ದರೆ ನಿನಗೆಂದೇ ತಂದ ಕೆಂಪು ಹರಳಿನ ಓಲೆಯನ್ನ ಕೊಡುತ್ತಿದ್ದೆ. ಅಕ್ಕ ತನ್ನ ಎರಡು ಕಿವಿಗಳ ಅತ್ತ-ಇತ್ತ ಇಟ್ಟು, ತನ್ನ ಮುಖ ಕುಂಬಳಕಾಯಿಯಷ್ಟು ಅರಳಿಸಿ,' ನಂಗ್ಯಾವಗಾ ಕೊಡಿಸುತ್ತೀ?' ಎಂದು ಮುದ್ದಿಸಿದಳು. ಅಲ್ಲ ವಸು...ಈ ಮಳೆಗಾಲದಲಿ ನನ್ನ ಏಕಾಂತದಲಿ ಬಿಟ್ಟು ಏಕಾ ಏಕಿ ಹೋಗಿಬಿಡುವ ನಿರ್ದಾಕ್ಷಿಣ್ಯತೆಯಾರದೂ ಏನಿತ್ತು ನಿನಗೆ? ಕೊಂಚ ಕಾದಿದ್ದರೆ ಆ ಉಗಿ ಬಂಡಿಯ ಕಾಲವರೆಗೂ ಬಂದು ನಿನ್ನ ಗೊಗರೆದಾದರೂ ಇಲ್ಲೇ ಇರುವಂತೆ ಒಪ್ಪಿಸಿಬಿಡುತ್ತಿದ್ದೆ. ಮತ್ತೆ ಹಿಂತಿರುಗುವಾಗ ನೀನು ಪ್ರತಿಬಾರಿಯೂ ಕೇಳುತ್ತಿದ್ದ, ಗ್ರಂದಿಗೆ ಅಂಗಡಿಯ ತುದಿಯಲ್ಲಿ ಕೂರುತ್ತಿದ್ದ ಹಣ್ಣು-ಹಣ್ಣು ಅಜ್ಜಿಯ ಬಳಿ ಕಡಲೇಕಾಯಿ ಕೊಂಡು ಊರ ಉದ್ದಕ್ಕೋ ತಿನ್ನುತ್ತಾ, ನಿನ್ನ ಗೆಜ್ಜೆ ದನಿಯ ಆಮೊದಿಸುತ್ತ ಬರಬಹುದಿತ್ತು. ಇರಲಿ, ಪುಣ್ಯ ಬರುವಂತಿದ್ದರೆ ಕೊಂಚ-ಕೊಂಚವೇ ಬರಲಿ!

ನಾನು ಬಹುಷಃ ಮಾಳಿಗೆಯ ಮೇಲೆ ಮಲಗಿಬಿಟ್ಟೆ ಅನ್ನಿಸತ್ತೆ. ಅಮ್ಮ ಕೆಳಗಿನಿಂದ ಕೂಗಿದಾಗಲೇ ಎಚ್ಚರ. ಅಮ್ಮ-ಅಪ್ಪ-ಅಜ್ಜಿ-ಅಕ್ಕ ಎಲ್ಲ ಸಾಲಾಗಿ ತಟ್ಟೆಯ ಮುಂದೆ ಕುಳಿತು 'ಹುಡುಗ ಏನು ಮಾಡುತ್ತಿದ್ದ' ಎಂಬಂತೆ ನೋಡಿದರೆ, ಸುಮ್ಮನಿರಲಾಗದೆ, ' ಅಮ್ಮ, ವಸು ಊರಿಗೆ ಹೋದಳು' ಎಂದು ತೊದಲುವುದಾ...?! ನನ್ನ ಪೆದ್ದುತನಕ್ಕೆ ಎಲ್ಲರೂ ಮುಸುನಕ್ಕರು. ನೂರುಬಾರಿ ಮನೆದೇವರ ಸ್ಮರಿಸಿದಂತೆ ಮಾಡಿ ಮನೆಯಂಗಳಕ್ಕೆ ಹೋಗಿಬಿಟ್ಟೆ.

ಇರಲಿ, ಬೆಳಕು ಹರಿದಂತೆ ನಾನು ಮತ್ತೆ ಹೌಹಾರಿದಂತೆ ಕೆಲಸಕ್ಕೆ ಓಡುವುದು, ಔಪಚಾರಿಕವಾಗಿ ಕೆಲಸ ಮಾಡುವುದು, ಯಾರಿಗೋ ಷೋಢಷೋಪಚಾರ ಪೂಜೆ, ನಮಗೆ ಮಂಗಳಾರತಿ...ಬದುಕಿನಲಿ ಎಲ್ಲ ಇದ್ದಿದ್ದೆ! ಕೆಲಸದಿಂದ ಬಂದೊಡನೆ ತುದಿಗಾಲಲಿ ಕಾಯುತ್ತಿದ್ದ ನೀನು ಸಿಗುತ್ತಿದ್ದೆ. ಆಫೀಸಿನಿಂದ ಬರುತ್ತಾ ಗಾಲಿಬ್ ನ ಕವಿತೆಗಳ ಪುಸ್ತಕ ತಂದಿದ್ದೇನೆ. ಪಾರಮಾರ್ಥಿಕದ ಗರಿ ಬಿಚ್ಚಿದಂತಿರುವ ಅವನ ಕವಿತೆಗಳು, ವಿರಹದಂತಹ ವಿರಹವೇ ನನ್ನ ತಲೆ ಮೇಲೆ ಬಿದ್ದಂತಹ ನಾನು, ಅಜ್ಜಿಯ ಮನೆಯ ಹಿತ್ತಲಲ್ಲಿ ಸಣ್ಣ ಮಲ್ಲೆ, ಪಾರಿಜಾತ ಆಯುವ ನೀನು, ಗತಿಸಿಹೋದ ನಮ್ಮ ಬಾಲ್ಯ, ಬದುಕನ್ನು ಕೆಲಿಡಿಯೋಸ್ಕೋಪ್ ನಲ್ಲಿ ನೋಡಿದ ಹಾಗೆ ಭಾಸವಾಗುತ್ತಿದೆ! ನನ್ನ ತಿಳಿಮೊಗದ ಶ್ರೀಕಾಂತಿ...ಕೇಳು, ಬದುಕಲಿ ಒಲವಿನಂತೆ ವಿರಹವೂ ಬೇಕು. ಇಲ್ಲವಾದಲ್ಲಿ ಒಂದೇ ಚುಂಬನದಲಿ ಅಷ್ಟೂ ಮೋಹವೆಲ್ಲ ಕರಗುತ್ತದ? ಕಲಿತುಬಿಡುತ್ತೇನೆ ಎಂಬುದು ದಾಷ್ಟ್ಯದ ಮಾತಾದರೆ, ಕಲಿಸಿಕೊಡುವುದು ಬದುಕಿನ ಔದಾರ್ಯ! ಇಲ್ಲವಾದಲ್ಲಿ, ಚಂದಿರನ ಕಂದೀಲು ಹಿಡಿದು ನಿನ್ನ ಕನಸ ಕಾಣುವ, ಚುಕ್ಕಿಯ ಸಮೂಹದಲಿ ಆ ಚ-ಚೌಕ ರಾಶಿಯ ಹುಡುಕುವ, ನಿನ್ನ ಹಸಿರು ದುಪ್ಪಟ್ಟಾದ ಮೇಲೆ ಚಿನ್ನದ ಸರ ಸಣ್ಣಗೆ ಮರಳಿದಾಗ ಆ ಕಪ್ಪು ಮಚ್ಹೆಗಾಗಿ ತಡಕಾಡುವ, ನಿನ್ನ ಕೈ ಬಳೆಯ ಸದ್ದಿಗೆ ನವಿರಾಗುವ, ನಿನ್ನಂತಹ ಜೀವದ ಗೆಳತಿಯನ್ನು ಬಿಗಿದಪ್ಪಿಕೊಳ್ಳಲು ನನ್ನಂತಹ ಮೋಹಿತನೊಬ್ಬ ಇರಬೇಕು ಅಲ್ಲವ ವಸು? ನೀನೆ ಹೇಳು....!

-ನಿನ್ನವನು