Tuesday, July 27, 2010

ಪ್ರತಿರಾತ್ರಿ ನಿನ್ನ ಕನಸಲಿ ಕಾಣುವ ಯಕ್ಷ ಕಿನ್ನರ ನಾನೇ ಕಣೆ ಗೆಳತಿ..!


ಬೆಳ್ಳಿ ಹಕ್ಕಿ,

ಹೀಗೆಲ್ಲ ನಿನಗೆ ಪತ್ರ ಬರೆದು ಎಷ್ಟು ದಿನಗಳು ಸಂದವೋ ನನಗೆ ನೆನಪಿಲ್ಲ. ನನಗೆ ನನ್ನ ಭಾಷೆ, ನನ್ನ ನಿಲುವು, ಅದರ ಸೊಗಡು, ಭಾಷೆಯ ಮೌನ, ನನ್ನ ಭಾವ ಎಲ್ಲಾ ಮರೆತುಹೋಗಿದೆ. ನಿನ್ನ ಹುಟ್ಟಿದ ಹಬ್ಬದ ದಿನ ನಾವಿಬ್ಬರೂ ಆ ಸಣ್ಣ ಝರಿಯ ಬಂಡೆಯ ಮೇಲೆ ಭುಜಆನಿಸಿಕೊಂಡು ಮಾತನಾಡಿದ್ದೆ ಕೊನೆ. ನಿನ್ನ ಗೆಜ್ಜೆ ನನ್ನ ಪಾದ ತಾಕಿದಾಗ ಮಾಡಿದ 'ಘಲ್' ಅಷ್ಟೆ ನೆನಪಿದೆ ನನಗೆ! ನಿನ್ನ ಉಸಿರಿನ ಬಿಸಿ ನನ್ನ ಕೆನ್ನೆಯಲ್ಲಿನ್ನೂ ಇದೆ! ನನ್ನನ್ನು ಪ್ರತಿ ಬಾರಿಯೂ ಊರು, ನಾವಿಬ್ಬರೂ ಆಟವಾಡಿದ ಹೆಮ್ಮರ, ಮನೆಯ ಹಿಂದಿನ ಕಾಲು ದಾರಿಯ ನಡುವೆ ಹೋದರೆ ಸಿಗುವ ಗದ್ದೆ, ಪೂರ್ವದ ರವಿ ಉದಯಿಸುವಲ್ಲಿ ಝುಳು ಝುಳು ಮಾಡುವ ಝರಿ, ಸುಮ್ಮನೆ ನಿನ್ನ ನೋಡುತ್ತಾ ನಿನ್ನ ನೋಟದೊಳಗೆ ಕಳೆದುಹೋಗುವ ನನ್ನ ಪರಿ;ಎಷ್ಟೆಲ್ಲಾ ಸೆಳೆತಗಳಿವೆ ನನಗೆ. ಈ ಸಂದಣಿಯಲ್ಲಿ ನನ್ನ identity ಗಳೇನೂ ಇಲ್ಲ. ನಾನಿಲ್ಲ ಏಕಾಂಗಿಗಿಂತ ಏಕಾಂಗಿ. ನನಗೆ ನಾನೇ ಸ್ವಗತ ವನ್ನು, ಸಂಭಾಷಣೆಯನ್ನು ಬರೆದುಕೊಳ್ಳುತ್ತೇನೆ. ಒಂಟಿತನದಲ್ಲಿ ಮಾತನಾಡಿಕೊಳ್ಳಲು! ಇಲ್ಲಿ ಯಾರೋ ನೀರು ಚುಮುಕಿಸಿ ಸ್ವಚ್ಚಪಡಿಸಿದಂತಹ ಮುಗಿಲು. ಹಗಲು ಕರಗಿ, ರಂಗವಲ್ಲಿ ಚೆಲ್ಲಿ ಚುಕ್ಕಿ ಮಿನುಗುವುದೊಂದೇ ಬಾಕಿ ಎದೆಯೊಳಗೆ. ನಿನ್ನ ಭೇಟಿ ಮಾಡುವ ವೇಳೆಗೆ ನನ್ನನೊಮ್ಮೆ ಭೇಟಿ ನೀಡಲಿ ಕವಿತೆಗಳು!

सहेली...
ये पहेली तेरे प्यार का...!!

ಅಲ್ಲಿ ಅಮ್ಮ ಚತ್ತ್ನಿಪುಡಿ ಮಾಡಿಟ್ಟಿರುತ್ತಾರೆ.ಮಿಡಿ ಉಪ್ಪಿನಕಾಯಿಯ ಅರ್ಧ ಡಬ್ಬಿ ನೀನೆ ಖಾಲಿ ಮಾಡಿರುವೆ ಅಂದರು ಅಮ್ಮ, ಭಲೇ!! ಮುಂದಿನ ಬೇಸಿಗೆಗೆ ನಾನಷ್ಟೇ ಮರ ಹತ್ತಿ ಮಾವಿನ ಕಾಯಿ ಕೀಳಬೇಕು! ಬಂದಿದ್ದೀಯ ನೀನೆನ್ದಾದರೋಮ್ಮೆ ನನ್ನ ಜೊತೆ?! ಮೊನ್ನೆ ಪುಸ್ತಕದ ಮಳಿಗೆಗೆ ಹೋದಾಗ ಸುಬ್ಬರಾಯ ಚೊಕ್ಕಾಡಿಯವರ ಕವನ ಸಂಕಲನವೊಂದು ಖರೀದಿಸಿದ್ದೇನೆ.ಇಲ್ಲೊಂದು ಕವಿತೆಯಿದೆ, 'ಗಂಗೋತ್ರಿಯ ಹಕ್ಕಿಗು', ನೀನೊಮ್ಮೆ ಓದಬೇಕು. ಅಲ್ಲಿ ಹದವಾಗಿ ನನ್ನ ನೆನಪು ಬೆಚ್ಚಗೆ ಮಾಡಿರು! ಈ ವಾರಾಂತ್ಯಕ್ಕೆ ನಾನಲ್ಲಿ ಹಾಜರು. ನಾವಲ್ಲಿ ದೂರದ ದಿಗಂತದ ಕಟ್ಟ ಕಡೆಯವರೆಗೂ ಮಾತನಾಡುತ್ತ ನಡೆಯಬೇಕಿದೆ. ನನಗಂತೂ ನಿನ್ನೊಡನೆ ಮಾತನಾಡಲು ಮಾತು ನೂರಿದೆ. ನೀನು ಕೆಲಬೇಕಷ್ಟೇ! ಆದರೆ ನಾನೆಲ್ಲಿ ನಿನ್ನ ಆಳ ಕಣ್ಣುಗಳನ್ನು ನೋಡುತ್ತಾ, ಈಗಷ್ಟೇ ಗುಲಾಬಿ ಪಟಿಲಗಳಲ್ಲಿ ಅದ್ದಿದ ಕೆನ್ನೆಗೆ, ಮುಂದಲೆಯ ನಡುವೆ ಆಗೊಮ್ಮೆ-ಈಗೊಮ್ಮೆ ಬಂದಿಣುಕುವ ಮುಂಗುರುಳಿಗೆ, ಇಬ್ಬನಿ ಈಗಷ್ಟೇ ಹೆಪ್ಪುಗತ್ತಿದಂತಹ ತುಟಿಗಳಿಗೆ ನಾನೆಲ್ಲಿ ಮೌನಿಯಾಗಿ ಬಿಡುತ್ತೀನೋ ಎಂಬ ಭಯ! ಹುಚ್ಚು ಹುಡುಗ ನಾನು!! ನಿನ್ನ ಕಣ್ಣಲ್ಲಿರುವುದು ಯಾವ ಮಾಯದ ದರ್ಪಣ?! ಇಂತಹ ಮನೋವಾಂಛೆಗಳಿಗೆ ನೂಕುವವಳು ನೀನು, ನನ್ನನ್ನು ನಿಂದಿಸಿ ಪ್ರಯೋಜನವಿಲ್ಲ!
ಅಮ್ಮನಿಗೆ ಫೋನ್ ಮಾಡಿದಾಗ ಸಂಡಿಗೆ ಮಾಡುತ್ತಿದ್ದೀನಿ ಎಂದರು. ಈ ಆಷಾಡದಲ್ಲಿ ಸಂಡಿಗೆ ಎಲ್ಲಿ ಒಣಗುತ್ತದೆ? ಇರಲಿ ಬಿಡು, ತಿನ್ನಲು ನಾವಿಬ್ಬರು ಇರುತ್ತೇವಲ್ಲ? ಏನೆಲ್ಲಾ ಬಾಕಿ ಇದೆ ಗೆಳತಿ, ನನ್ನ ನೂರು ಮಾತು, ನಿನ್ನ ಮೌನ, ಕಣ್ಣ ಕೊಂಕು, ತುಟಿಯ ನಗೆ, ಸಣ್ಣ ಅನತಿ, ಒಂದು ಕವಿತೆ, ಅಲ್ಲಿನ ಝಾರಿಯ ಓಘ, ನಿನ್ನ ಹೆಜ್ಜೆಯೊಂದಿಗೆ ದನಿ ಮಾಡುವ ಗೆಜ್ಜೆ and ನನ್ನ ಚಂಚಲ ಚಂಚಲ ಮನಸ್ಸು!! ಈ ಹುಡುಗರೇ ಹೀಗೇನೋ ಅಥವಾ ನೀನೆ ಅಷ್ಟು ಚಂದವೆದ್ದೀಯೋ...? ನಾನಾದರೂ ಏಕೆ ನಿನ್ನಲ್ಲಿ ಮೋಹಿತನಾಗುತ್ತೇನೋ? ಹೀಗೆ ನೂರಾರು ಪ್ರಶ್ನೆಗಳು, ಉತ್ತರವಿದೆಯ, ಗೊತ್ತಿಲ್ಲ! ಪ್ರತಿರಾತ್ರಿ ನಿನ್ನ ಕನಸಲಿ ಕಾಣುವ ಯಕ್ಷ ಕಿನ್ನರ ನಾನೇ ಕಣೆ ಗೆಳತಿ...ನಿನ್ನ ಒಂದು ಸಣ್ಣ ಚುಂಬನಕ್ಕಾಗಿ ನಾನೆಷ್ಟು ಚಡಪಡಿಸಬೇಕು ಇಲ್ಲಿ?

ಮನಸ್ಸು ಒಂದು ಲಯಕ್ಕೆ ಬಂದಿದೆ. ನಾನು ಇಲ್ಲಿಂದ ಹೊರಡಬೇಕಷ್ಟೇ.ನೆನಪು ನವುರಾಗಿ ಹಬ್ಬುತ್ತದೆ. ನಿನ್ನ ಒಲವು, ನನ್ನ ಬಯಕೆ, ಅಮ್ಮನ ಆಸೆಗಣ್ಣು, ಅಪ್ಪನ ಹಳೆಯ ಬೆತ್ತದ ಕುರ್ಚಿ, ಅವರ್ಣನೀಯ ನೂರು ವರ್ಣಗಳ ಚಿತ್ತಾರ,ನೆನಪು! ನಾನಲ್ಲಿ, ಅಪ್ಪ ಆಫೀಸಿನಿಂದ ಬರುವ ವೇಳೆಗೆ ಮನೆ ಸೇರಿಬಿಡುವ ಪುಟ್ಟ ಬಾಲಕನಂತೆ ಮನೆ ಸೇರಿಬಿಡುತ್ತೇನೆ. ನಂತರ...ಇದ್ದೆ ಇದೆ ನಮ್ಮ ನಡುವಿನ ಅವಿಶ್ರಾಂತ ಮಾತುಗಳ,ನೆನಪುಗಳ, ಆಸೆಗಳ ಚಾವಡಿ. ಇಲ್ಲಿ ಎದೆಯಲ್ಲಿ ಯಾವುದೋ ಬೆಳ್ಳಿ ಹಕ್ಕಿಯ ದನಿಯಿದೆ. ಮತ್ತೆ ನಿನ್ನ ನೆನಪಷ್ಟೇ ಪರಿಭ್ರಮಿಸುತ್ತದೆ!! I'm helpless!!

-ನಿನ್ನವನು.