Friday, June 26, 2009

ಮಂತ್ರಗಳ ಸ್ವರದ ಏರಿಳಿತದಲ್ಲಿ ನೀನೆ-ನೀನು..


ಮುದ್ದು ಹುಡುಗಿ,

ಅಮೋಘ ಇಪ್ಪತ್ತನಾಲ್ಕು ವರ್ಷಗಳಿಂದ ಘೋರ ಬ್ರಹ್ಮಚರ್ಯ ಪಾಲಿಸುತ್ತಿದ್ದ ನನಗೆ, ನಿನ್ನ ನೋಡಿದಂದಿನಿಂದ ಎದೆಯೊಳಗೆ ಯಾವುದೋ ಹಕ್ಕಿಯ ಗೂಡು, ಮೆಲ್ಲನೆ ಚಿಲಿಪಿಲಿಯ ಹಾಡು. ಇಷ್ಟು ವರ್ಷ ನನ್ನ ಕಣ್ಣಿಗೆ ಒಮ್ಮೆಯೂ ಬಾರದಂತೆ ಎಲ್ಲಿದ್ದೆ ನೀನು! ಇತ್ತೀಚಿಗೆ ಘಟಿಸಿದಂತೆ, ವಾರಗಳ ಹಿಂದೆ ನಿನ್ನನ್ನು ನೋಡಿರಬಹುದು ಅಷ್ಟೇ...! ನೀನು, ನನ್ನನ್ನು ತೀರ ಈ ಪರಿಯಾಗಿ ಕಾಡಬಹುದು ಎಂದು ನಾನೂ ಊಹಿಸಿರಲಿಲ್ಲ! ಚಂದಿರ ನಕ್ಕಂತ ನಗು, ಮೊನ್ನೆ ಗೆಳೆಯರೊಡನೆ ಜೋಗ ಜಲಪಾತಕ್ಕೆ ಹೋದಾಗ ಜಲಪಾತದಲ್ಲಿ ಕಂಡಿದ್ದು ಬಹುಷಃ ನಿನ್ನದೇ ಕಣ್ಣಿನ ಆಳ, ತುಟಿಯಲ್ಲಿನ ಇಬ್ಬನಿ, ಮುಖವರಳಿಸಿ ನಕ್ಕರೆ ಮೆಲ್ಲನೆ ತಲೆದೂಗುವಂತೆ ನಿನ್ನ ಕಿವಿಯೋಲೆಗಳು, ರಾಘವೇಂದ್ರ ಸ್ವಾಮಿ ಮಠದ ಮುಂದೆ ಕೈ ಜೋಡಿಸಿ, ಬಿಗಿಯಾಗಿ ಕಣ್ಣು ಮುಚ್ಚಿ ಪ್ರಾರ್ಥಿಸುತ್ತ ನಿಂತಿದ್ದರೆ, ನಿನ್ನದು ಯಾವ ನಾಟ್ಯದ ಭಂಗಿ?! ನಾನಾಗಬಾರದಿತ್ತೆ ರಾಘವೇಂದ್ರ ಸ್ವಾಮಿ!! ನಿನ್ನ ಸ್ಕೂಟಿಯಲ್ಲಿ ಹಕ್ಕಿಯಂತೆ ಹೊರಟರೆ, ಮಠ ಬೀದಿಯ ತುದಿ ಕಾಣುವವರೆಗೂ ನಿನ್ನನ್ನೇ ದಿಟ್ಟಿಸುತ್ತೇನೆ , And you look damn cute! ' ಹುಡುಗಿ, ಎಷ್ಟು ಚೂಟಿಯಾಗಿದ್ದಾಳೆ ಅಲ್ಲವಾ...?' ಎಂದರೆ ಗೆಳೆಯರೆಲ್ಲ ' ಲೋ ವಿಶ್ವಾ...' ಎಂದು ನನ್ನನ್ನೇ ದಿಟ್ಟಿಸುತ್ತಾರೆ. ಇವರಿಗೆ ಯಾವ ಸುಳಿವು ಸಿಕ್ಕಿತೋ?!

ಇಲ್ಲಿ, ಮಠ ಬೀದಿಯ ತುದಿಯಲ್ಲಿ ನಾಟ್ಯ ಶಾಲೆಯಿದೆ ಎಂದು ತಿಳಿದಿದ್ದೇ ನೀನಲ್ಲಿ ಭರತನಾಟ್ಯ ಕಲಿಯಲು ಬರುತ್ತೀಯ ಎಂದು ತಿಳಿದಾಗ! ಸಂಜೆ, ನನ್ನ ವೇದಗಳ ಅಭ್ಯಾಸ ಮುಗಿಸಿ ವೇದ ಪಾಠ ಶಾಲೆಯಿಂದ ಹೊರ ಬಂದವನಿಗೆ ಕಂಡವಳೇ ನೀನು. ನಿನ್ನನ್ನು ಊರಿನಲ್ಲಿ ನೋಡಿದ್ದೇ ವಾರಗಳ ಹಿಂದೆ. ಸುಝುಕಿಯಲ್ಲಿ ಸುಮ್ಮನೆ ಎಲ್ಲೊ ಹೊರಟಿದ್ದಾಗ ರಸ್ತೆಯ ನಡುವೆ ನಿನ್ನ ಎಲ್ಲೊ ಗಮನಿಸಿದ್ದೆ. " ಯಾರೋ ಸುಬ್ಬು...ಹುಡುಗಿ ಮುದ್ದಾಗಿದ್ದಾಳೆ.." ಎಂದಿದ್ದೆ. ' ಏನು ವಿಶ್ವಾ...ವಿಷ್ಯ...' ಎಂಬಂತೆ ಕಣ್ಣಲ್ಲೇ ಕೇಳಿದ್ದ. ಸುಬ್ರಮ್ಹಣ್ಯ ಭಟ್ ಹುಡುಗಿಯರ detailed database! ಪ್ರವರದಂತೆ ಎಲ್ಲಾ ಒಪ್ಪಿಸಿದ್ದ. ಹೆಸರೇ ಚಂದ್ರಿಕಾ, ಮನಸ್ಸು ಹಾಲು ಬೆಳದಿಂಗಳು! ನಾನಿಲ್ಲಿ ಪಾಠಶಾಲೆಯಲ್ಲಿ ವೇದಾದ್ಯಯನ ಮಾಡುತ್ತಿದ್ದರೆ ನನ್ನ ಮಂತ್ರೋಕ್ತಿಗಳಲ್ಲೆಲ್ಲಾ ನೀನೆ ನೀನು! ನನ್ನ ನೋಡಿಯೂ ನೋಡದಂತೆ ಮಾಡಿ ಸುಮ್ಮನೆ ಕಿರುನಗೆ ಬೀರಿದರೆ, ಮನಸ್ಸು... ' ಓಂ ಶಾಂತಿ ಶಾಂತಿ ಶಾಂತಿ...' !

'ಇವನ್ಯಾರೋ ಹುಡುಗ..ಸುಮ್ಮನೆ ದಿಟ್ತಿಸುತ್ತಾನಲ್ಲಾ...' ಅಂದುಕೊಂಡರೆ ಅದು ನಾನೇ ಕಣೆ ಹುಡುಗಿ! ಇಂದು ಹೊರಗಡೆ ಜೋರು ಮಳೆ. ನಿನ್ನ ನೋಡುವ ಯಾವ ಸುಳಿವೂ ಇಲ್ಲ. ನಾಳೆ ವೇದಾಭ್ಯಾಸದ ನೆಪದಲ್ಲಿ ನಿನ್ನನ್ನೇ ನೋಡಲು ಬರುತ್ತೇನೆ. ಮಂತ್ರಗಳ ಸ್ವರದಲ್ಲಿ, ಸ್ವರಗಳ ಏರಿಳಿತದಲ್ಲಿ, ನಿನ್ನನ್ನೇ ಕರೆದರೂ ಕರೆಯುತ್ತೇನೆ! ಮನೆಗೆ ಹೋಗುವ ದಾರಿಯಲ್ಲಿ, ನಿನ್ನ ಕುಡಿನೋಟದಲ್ಲಿ ನನ್ನನ್ನೇ ನೋಡುತ್ತಿರು, ಗೆಳತಿಯರನ್ನು ನೋಡಿದಂತೆ ಮಾಡಿ, ಒಂದು ಸಣ್ಣ ನಗೆ ನೀಡುತ್ತಿರು, ತೀರ ಪ್ರೇಮವೆಂಬ ಪ್ರೇಮದಲ್ಲಿ ಬಿದ್ದರೂ ಬಿದ್ದೇನು! ಬೆಳಗೆದ್ದರೆ, ಆಫೀಸು , ಕೆಲಸ ಇದ್ದಿದ್ದೇ. ಇರಲಿ, ನನ್ನಲ್ಲೂ-ನಿನ್ನಲ್ಲು ಒಂದಷ್ಟು ಪ್ರೇಮ ಕಥೆ. ಒಂದು ಆಷಾಢದ ಸಂಜೆಯಲಿ, ತಿಳಿಗಾಳಿ ಬೀಸುವಾಗ, ನನ್ನ ಪ್ರೀತಿ ನಿವೇದಿಸಿಕೊಂಡರು ನಿವೇದಿಸಿಕೊಂಡೇನು...!!
- ನಿನ್ನವನು.