Thursday, April 28, 2011

ಬದುಕಲಿ ಒಲವಿನಂತೆ ವಿರಹವೂ ಬೇಕು ನನ್ನ ತಿಳಿಮೊಗದ ಶ್ರೀಕಾಂತಿ..!
ಪುನರ್ವಸು,

ಮತ್ತೆ ಗಾಳಿ ಬೀಸುತಿದೆ. ದೂರದ ಅರಬ್ಬೀ ಸಮುದ್ರದ ಮೇಲೆ ನಿರ್ಮಾನುಶೀ ಮಳೆಯಾಗುತ್ತಿರಬಹುದು. ನಾನಿಲ್ಲಿ ಅಮ್ಮ ಎಂದಿಗೂ ಹಾಡಿಕೊಳ್ಳುತ್ತಿದೆ ' ಕೃಷ್ಣ ಎನಬಾರದೇ..." ಹಾಡನ್ನು ಗುನುಗಿಕೊಳ್ಳುತ್ತಿದ್ದೇನೆ. ನೀನು ಈ ರಜೆಯಲ್ಲಿ ನನ್ನೊಬ್ಬನನ್ನೇ ಒಬ್ಬಂಟಿಯಾಗಿ ಬಿಟ್ಟು ಅಲ್ಲಿ ಅಜ್ಜಿಯ ಮನೆಗೆ ಹೋದಾಗಿನಿಂದ ಈ ಮನಸಿನ ಗೋದಾಮಿನ ತುಂಬಾ ನಿನದೆ ನೆನಪು. ಬೆಳಗೆಲ್ಲ ಅಮಾನುಷವಾಗಿ ಸುರಿದ ಬಿಸಿಲು ಆ ಬೆಟ್ಟದ ಮರೆಯಲಿ ಕುಳಿತು ಬೀಸಣಿಕೆ ಬೀಸಿಕೊಳ್ಳುತ್ತಿದೆಯಂತೆ, ಮುಗಿಲು ಇನ್ನೂ ಕೆಂಡ ಸಂಪಿಗೆ. ನಾನು ಆಫೀಸಿನಿಂದ ಬಂದೊಡನೆ ಮಾಡುವ ಒಂದೇ ಕೆಲಸ ಅಂದರೆ, ಮನೆಯ ಮಾಳಿಗೆಯನು ಹತ್ತಿ ಹರಿದ ಚತ್ರಿಯ ನಡುವೆ ಮಿನುಗುವ ಚುಕ್ಕಿಗಳನು ಎಣಿಸುವುದು. ಅದೋ, ಚೌಕಾಕಾರವಾಗಿ ಕಾಣುತ್ತದಲ್ಲ ಆ ನಕ್ಷತ್ರದ ರಾಶಿ, ಅದು ನೀನು, ಪುನರ್ವಸು!

ಅಕ್ಕ ಹೇಳಿದಳು, ನೀನು ಹೋಗುವ ಮುನ್ನ ನನ್ನ ಕೇಳಿ ಹೋದೆಯಂತೆ. ಕೊಂಚ ನಿಧಾನಿಸಿ ಹೋಗಿದ್ದರೆ ನಿನಗೆಂದೇ ತಂದ ಕೆಂಪು ಹರಳಿನ ಓಲೆಯನ್ನ ಕೊಡುತ್ತಿದ್ದೆ. ಅಕ್ಕ ತನ್ನ ಎರಡು ಕಿವಿಗಳ ಅತ್ತ-ಇತ್ತ ಇಟ್ಟು, ತನ್ನ ಮುಖ ಕುಂಬಳಕಾಯಿಯಷ್ಟು ಅರಳಿಸಿ,' ನಂಗ್ಯಾವಗಾ ಕೊಡಿಸುತ್ತೀ?' ಎಂದು ಮುದ್ದಿಸಿದಳು. ಅಲ್ಲ ವಸು...ಈ ಮಳೆಗಾಲದಲಿ ನನ್ನ ಏಕಾಂತದಲಿ ಬಿಟ್ಟು ಏಕಾ ಏಕಿ ಹೋಗಿಬಿಡುವ ನಿರ್ದಾಕ್ಷಿಣ್ಯತೆಯಾರದೂ ಏನಿತ್ತು ನಿನಗೆ? ಕೊಂಚ ಕಾದಿದ್ದರೆ ಆ ಉಗಿ ಬಂಡಿಯ ಕಾಲವರೆಗೂ ಬಂದು ನಿನ್ನ ಗೊಗರೆದಾದರೂ ಇಲ್ಲೇ ಇರುವಂತೆ ಒಪ್ಪಿಸಿಬಿಡುತ್ತಿದ್ದೆ. ಮತ್ತೆ ಹಿಂತಿರುಗುವಾಗ ನೀನು ಪ್ರತಿಬಾರಿಯೂ ಕೇಳುತ್ತಿದ್ದ, ಗ್ರಂದಿಗೆ ಅಂಗಡಿಯ ತುದಿಯಲ್ಲಿ ಕೂರುತ್ತಿದ್ದ ಹಣ್ಣು-ಹಣ್ಣು ಅಜ್ಜಿಯ ಬಳಿ ಕಡಲೇಕಾಯಿ ಕೊಂಡು ಊರ ಉದ್ದಕ್ಕೋ ತಿನ್ನುತ್ತಾ, ನಿನ್ನ ಗೆಜ್ಜೆ ದನಿಯ ಆಮೊದಿಸುತ್ತ ಬರಬಹುದಿತ್ತು. ಇರಲಿ, ಪುಣ್ಯ ಬರುವಂತಿದ್ದರೆ ಕೊಂಚ-ಕೊಂಚವೇ ಬರಲಿ!

ನಾನು ಬಹುಷಃ ಮಾಳಿಗೆಯ ಮೇಲೆ ಮಲಗಿಬಿಟ್ಟೆ ಅನ್ನಿಸತ್ತೆ. ಅಮ್ಮ ಕೆಳಗಿನಿಂದ ಕೂಗಿದಾಗಲೇ ಎಚ್ಚರ. ಅಮ್ಮ-ಅಪ್ಪ-ಅಜ್ಜಿ-ಅಕ್ಕ ಎಲ್ಲ ಸಾಲಾಗಿ ತಟ್ಟೆಯ ಮುಂದೆ ಕುಳಿತು 'ಹುಡುಗ ಏನು ಮಾಡುತ್ತಿದ್ದ' ಎಂಬಂತೆ ನೋಡಿದರೆ, ಸುಮ್ಮನಿರಲಾಗದೆ, ' ಅಮ್ಮ, ವಸು ಊರಿಗೆ ಹೋದಳು' ಎಂದು ತೊದಲುವುದಾ...?! ನನ್ನ ಪೆದ್ದುತನಕ್ಕೆ ಎಲ್ಲರೂ ಮುಸುನಕ್ಕರು. ನೂರುಬಾರಿ ಮನೆದೇವರ ಸ್ಮರಿಸಿದಂತೆ ಮಾಡಿ ಮನೆಯಂಗಳಕ್ಕೆ ಹೋಗಿಬಿಟ್ಟೆ.

ಇರಲಿ, ಬೆಳಕು ಹರಿದಂತೆ ನಾನು ಮತ್ತೆ ಹೌಹಾರಿದಂತೆ ಕೆಲಸಕ್ಕೆ ಓಡುವುದು, ಔಪಚಾರಿಕವಾಗಿ ಕೆಲಸ ಮಾಡುವುದು, ಯಾರಿಗೋ ಷೋಢಷೋಪಚಾರ ಪೂಜೆ, ನಮಗೆ ಮಂಗಳಾರತಿ...ಬದುಕಿನಲಿ ಎಲ್ಲ ಇದ್ದಿದ್ದೆ! ಕೆಲಸದಿಂದ ಬಂದೊಡನೆ ತುದಿಗಾಲಲಿ ಕಾಯುತ್ತಿದ್ದ ನೀನು ಸಿಗುತ್ತಿದ್ದೆ. ಆಫೀಸಿನಿಂದ ಬರುತ್ತಾ ಗಾಲಿಬ್ ನ ಕವಿತೆಗಳ ಪುಸ್ತಕ ತಂದಿದ್ದೇನೆ. ಪಾರಮಾರ್ಥಿಕದ ಗರಿ ಬಿಚ್ಚಿದಂತಿರುವ ಅವನ ಕವಿತೆಗಳು, ವಿರಹದಂತಹ ವಿರಹವೇ ನನ್ನ ತಲೆ ಮೇಲೆ ಬಿದ್ದಂತಹ ನಾನು, ಅಜ್ಜಿಯ ಮನೆಯ ಹಿತ್ತಲಲ್ಲಿ ಸಣ್ಣ ಮಲ್ಲೆ, ಪಾರಿಜಾತ ಆಯುವ ನೀನು, ಗತಿಸಿಹೋದ ನಮ್ಮ ಬಾಲ್ಯ, ಬದುಕನ್ನು ಕೆಲಿಡಿಯೋಸ್ಕೋಪ್ ನಲ್ಲಿ ನೋಡಿದ ಹಾಗೆ ಭಾಸವಾಗುತ್ತಿದೆ! ನನ್ನ ತಿಳಿಮೊಗದ ಶ್ರೀಕಾಂತಿ...ಕೇಳು, ಬದುಕಲಿ ಒಲವಿನಂತೆ ವಿರಹವೂ ಬೇಕು. ಇಲ್ಲವಾದಲ್ಲಿ ಒಂದೇ ಚುಂಬನದಲಿ ಅಷ್ಟೂ ಮೋಹವೆಲ್ಲ ಕರಗುತ್ತದ? ಕಲಿತುಬಿಡುತ್ತೇನೆ ಎಂಬುದು ದಾಷ್ಟ್ಯದ ಮಾತಾದರೆ, ಕಲಿಸಿಕೊಡುವುದು ಬದುಕಿನ ಔದಾರ್ಯ! ಇಲ್ಲವಾದಲ್ಲಿ, ಚಂದಿರನ ಕಂದೀಲು ಹಿಡಿದು ನಿನ್ನ ಕನಸ ಕಾಣುವ, ಚುಕ್ಕಿಯ ಸಮೂಹದಲಿ ಆ ಚ-ಚೌಕ ರಾಶಿಯ ಹುಡುಕುವ, ನಿನ್ನ ಹಸಿರು ದುಪ್ಪಟ್ಟಾದ ಮೇಲೆ ಚಿನ್ನದ ಸರ ಸಣ್ಣಗೆ ಮರಳಿದಾಗ ಆ ಕಪ್ಪು ಮಚ್ಹೆಗಾಗಿ ತಡಕಾಡುವ, ನಿನ್ನ ಕೈ ಬಳೆಯ ಸದ್ದಿಗೆ ನವಿರಾಗುವ, ನಿನ್ನಂತಹ ಜೀವದ ಗೆಳತಿಯನ್ನು ಬಿಗಿದಪ್ಪಿಕೊಳ್ಳಲು ನನ್ನಂತಹ ಮೋಹಿತನೊಬ್ಬ ಇರಬೇಕು ಅಲ್ಲವ ವಸು? ನೀನೆ ಹೇಳು....!

-ನಿನ್ನವನು

Tuesday, July 27, 2010

ಪ್ರತಿರಾತ್ರಿ ನಿನ್ನ ಕನಸಲಿ ಕಾಣುವ ಯಕ್ಷ ಕಿನ್ನರ ನಾನೇ ಕಣೆ ಗೆಳತಿ..!


ಬೆಳ್ಳಿ ಹಕ್ಕಿ,

ಹೀಗೆಲ್ಲ ನಿನಗೆ ಪತ್ರ ಬರೆದು ಎಷ್ಟು ದಿನಗಳು ಸಂದವೋ ನನಗೆ ನೆನಪಿಲ್ಲ. ನನಗೆ ನನ್ನ ಭಾಷೆ, ನನ್ನ ನಿಲುವು, ಅದರ ಸೊಗಡು, ಭಾಷೆಯ ಮೌನ, ನನ್ನ ಭಾವ ಎಲ್ಲಾ ಮರೆತುಹೋಗಿದೆ. ನಿನ್ನ ಹುಟ್ಟಿದ ಹಬ್ಬದ ದಿನ ನಾವಿಬ್ಬರೂ ಆ ಸಣ್ಣ ಝರಿಯ ಬಂಡೆಯ ಮೇಲೆ ಭುಜಆನಿಸಿಕೊಂಡು ಮಾತನಾಡಿದ್ದೆ ಕೊನೆ. ನಿನ್ನ ಗೆಜ್ಜೆ ನನ್ನ ಪಾದ ತಾಕಿದಾಗ ಮಾಡಿದ 'ಘಲ್' ಅಷ್ಟೆ ನೆನಪಿದೆ ನನಗೆ! ನಿನ್ನ ಉಸಿರಿನ ಬಿಸಿ ನನ್ನ ಕೆನ್ನೆಯಲ್ಲಿನ್ನೂ ಇದೆ! ನನ್ನನ್ನು ಪ್ರತಿ ಬಾರಿಯೂ ಊರು, ನಾವಿಬ್ಬರೂ ಆಟವಾಡಿದ ಹೆಮ್ಮರ, ಮನೆಯ ಹಿಂದಿನ ಕಾಲು ದಾರಿಯ ನಡುವೆ ಹೋದರೆ ಸಿಗುವ ಗದ್ದೆ, ಪೂರ್ವದ ರವಿ ಉದಯಿಸುವಲ್ಲಿ ಝುಳು ಝುಳು ಮಾಡುವ ಝರಿ, ಸುಮ್ಮನೆ ನಿನ್ನ ನೋಡುತ್ತಾ ನಿನ್ನ ನೋಟದೊಳಗೆ ಕಳೆದುಹೋಗುವ ನನ್ನ ಪರಿ;ಎಷ್ಟೆಲ್ಲಾ ಸೆಳೆತಗಳಿವೆ ನನಗೆ. ಈ ಸಂದಣಿಯಲ್ಲಿ ನನ್ನ identity ಗಳೇನೂ ಇಲ್ಲ. ನಾನಿಲ್ಲ ಏಕಾಂಗಿಗಿಂತ ಏಕಾಂಗಿ. ನನಗೆ ನಾನೇ ಸ್ವಗತ ವನ್ನು, ಸಂಭಾಷಣೆಯನ್ನು ಬರೆದುಕೊಳ್ಳುತ್ತೇನೆ. ಒಂಟಿತನದಲ್ಲಿ ಮಾತನಾಡಿಕೊಳ್ಳಲು! ಇಲ್ಲಿ ಯಾರೋ ನೀರು ಚುಮುಕಿಸಿ ಸ್ವಚ್ಚಪಡಿಸಿದಂತಹ ಮುಗಿಲು. ಹಗಲು ಕರಗಿ, ರಂಗವಲ್ಲಿ ಚೆಲ್ಲಿ ಚುಕ್ಕಿ ಮಿನುಗುವುದೊಂದೇ ಬಾಕಿ ಎದೆಯೊಳಗೆ. ನಿನ್ನ ಭೇಟಿ ಮಾಡುವ ವೇಳೆಗೆ ನನ್ನನೊಮ್ಮೆ ಭೇಟಿ ನೀಡಲಿ ಕವಿತೆಗಳು!

सहेली...
ये पहेली तेरे प्यार का...!!

ಅಲ್ಲಿ ಅಮ್ಮ ಚತ್ತ್ನಿಪುಡಿ ಮಾಡಿಟ್ಟಿರುತ್ತಾರೆ.ಮಿಡಿ ಉಪ್ಪಿನಕಾಯಿಯ ಅರ್ಧ ಡಬ್ಬಿ ನೀನೆ ಖಾಲಿ ಮಾಡಿರುವೆ ಅಂದರು ಅಮ್ಮ, ಭಲೇ!! ಮುಂದಿನ ಬೇಸಿಗೆಗೆ ನಾನಷ್ಟೇ ಮರ ಹತ್ತಿ ಮಾವಿನ ಕಾಯಿ ಕೀಳಬೇಕು! ಬಂದಿದ್ದೀಯ ನೀನೆನ್ದಾದರೋಮ್ಮೆ ನನ್ನ ಜೊತೆ?! ಮೊನ್ನೆ ಪುಸ್ತಕದ ಮಳಿಗೆಗೆ ಹೋದಾಗ ಸುಬ್ಬರಾಯ ಚೊಕ್ಕಾಡಿಯವರ ಕವನ ಸಂಕಲನವೊಂದು ಖರೀದಿಸಿದ್ದೇನೆ.ಇಲ್ಲೊಂದು ಕವಿತೆಯಿದೆ, 'ಗಂಗೋತ್ರಿಯ ಹಕ್ಕಿಗು', ನೀನೊಮ್ಮೆ ಓದಬೇಕು. ಅಲ್ಲಿ ಹದವಾಗಿ ನನ್ನ ನೆನಪು ಬೆಚ್ಚಗೆ ಮಾಡಿರು! ಈ ವಾರಾಂತ್ಯಕ್ಕೆ ನಾನಲ್ಲಿ ಹಾಜರು. ನಾವಲ್ಲಿ ದೂರದ ದಿಗಂತದ ಕಟ್ಟ ಕಡೆಯವರೆಗೂ ಮಾತನಾಡುತ್ತ ನಡೆಯಬೇಕಿದೆ. ನನಗಂತೂ ನಿನ್ನೊಡನೆ ಮಾತನಾಡಲು ಮಾತು ನೂರಿದೆ. ನೀನು ಕೆಲಬೇಕಷ್ಟೇ! ಆದರೆ ನಾನೆಲ್ಲಿ ನಿನ್ನ ಆಳ ಕಣ್ಣುಗಳನ್ನು ನೋಡುತ್ತಾ, ಈಗಷ್ಟೇ ಗುಲಾಬಿ ಪಟಿಲಗಳಲ್ಲಿ ಅದ್ದಿದ ಕೆನ್ನೆಗೆ, ಮುಂದಲೆಯ ನಡುವೆ ಆಗೊಮ್ಮೆ-ಈಗೊಮ್ಮೆ ಬಂದಿಣುಕುವ ಮುಂಗುರುಳಿಗೆ, ಇಬ್ಬನಿ ಈಗಷ್ಟೇ ಹೆಪ್ಪುಗತ್ತಿದಂತಹ ತುಟಿಗಳಿಗೆ ನಾನೆಲ್ಲಿ ಮೌನಿಯಾಗಿ ಬಿಡುತ್ತೀನೋ ಎಂಬ ಭಯ! ಹುಚ್ಚು ಹುಡುಗ ನಾನು!! ನಿನ್ನ ಕಣ್ಣಲ್ಲಿರುವುದು ಯಾವ ಮಾಯದ ದರ್ಪಣ?! ಇಂತಹ ಮನೋವಾಂಛೆಗಳಿಗೆ ನೂಕುವವಳು ನೀನು, ನನ್ನನ್ನು ನಿಂದಿಸಿ ಪ್ರಯೋಜನವಿಲ್ಲ!
ಅಮ್ಮನಿಗೆ ಫೋನ್ ಮಾಡಿದಾಗ ಸಂಡಿಗೆ ಮಾಡುತ್ತಿದ್ದೀನಿ ಎಂದರು. ಈ ಆಷಾಡದಲ್ಲಿ ಸಂಡಿಗೆ ಎಲ್ಲಿ ಒಣಗುತ್ತದೆ? ಇರಲಿ ಬಿಡು, ತಿನ್ನಲು ನಾವಿಬ್ಬರು ಇರುತ್ತೇವಲ್ಲ? ಏನೆಲ್ಲಾ ಬಾಕಿ ಇದೆ ಗೆಳತಿ, ನನ್ನ ನೂರು ಮಾತು, ನಿನ್ನ ಮೌನ, ಕಣ್ಣ ಕೊಂಕು, ತುಟಿಯ ನಗೆ, ಸಣ್ಣ ಅನತಿ, ಒಂದು ಕವಿತೆ, ಅಲ್ಲಿನ ಝಾರಿಯ ಓಘ, ನಿನ್ನ ಹೆಜ್ಜೆಯೊಂದಿಗೆ ದನಿ ಮಾಡುವ ಗೆಜ್ಜೆ and ನನ್ನ ಚಂಚಲ ಚಂಚಲ ಮನಸ್ಸು!! ಈ ಹುಡುಗರೇ ಹೀಗೇನೋ ಅಥವಾ ನೀನೆ ಅಷ್ಟು ಚಂದವೆದ್ದೀಯೋ...? ನಾನಾದರೂ ಏಕೆ ನಿನ್ನಲ್ಲಿ ಮೋಹಿತನಾಗುತ್ತೇನೋ? ಹೀಗೆ ನೂರಾರು ಪ್ರಶ್ನೆಗಳು, ಉತ್ತರವಿದೆಯ, ಗೊತ್ತಿಲ್ಲ! ಪ್ರತಿರಾತ್ರಿ ನಿನ್ನ ಕನಸಲಿ ಕಾಣುವ ಯಕ್ಷ ಕಿನ್ನರ ನಾನೇ ಕಣೆ ಗೆಳತಿ...ನಿನ್ನ ಒಂದು ಸಣ್ಣ ಚುಂಬನಕ್ಕಾಗಿ ನಾನೆಷ್ಟು ಚಡಪಡಿಸಬೇಕು ಇಲ್ಲಿ?

ಮನಸ್ಸು ಒಂದು ಲಯಕ್ಕೆ ಬಂದಿದೆ. ನಾನು ಇಲ್ಲಿಂದ ಹೊರಡಬೇಕಷ್ಟೇ.ನೆನಪು ನವುರಾಗಿ ಹಬ್ಬುತ್ತದೆ. ನಿನ್ನ ಒಲವು, ನನ್ನ ಬಯಕೆ, ಅಮ್ಮನ ಆಸೆಗಣ್ಣು, ಅಪ್ಪನ ಹಳೆಯ ಬೆತ್ತದ ಕುರ್ಚಿ, ಅವರ್ಣನೀಯ ನೂರು ವರ್ಣಗಳ ಚಿತ್ತಾರ,ನೆನಪು! ನಾನಲ್ಲಿ, ಅಪ್ಪ ಆಫೀಸಿನಿಂದ ಬರುವ ವೇಳೆಗೆ ಮನೆ ಸೇರಿಬಿಡುವ ಪುಟ್ಟ ಬಾಲಕನಂತೆ ಮನೆ ಸೇರಿಬಿಡುತ್ತೇನೆ. ನಂತರ...ಇದ್ದೆ ಇದೆ ನಮ್ಮ ನಡುವಿನ ಅವಿಶ್ರಾಂತ ಮಾತುಗಳ,ನೆನಪುಗಳ, ಆಸೆಗಳ ಚಾವಡಿ. ಇಲ್ಲಿ ಎದೆಯಲ್ಲಿ ಯಾವುದೋ ಬೆಳ್ಳಿ ಹಕ್ಕಿಯ ದನಿಯಿದೆ. ಮತ್ತೆ ನಿನ್ನ ನೆನಪಷ್ಟೇ ಪರಿಭ್ರಮಿಸುತ್ತದೆ!! I'm helpless!!

-ನಿನ್ನವನು.

Thursday, January 21, 2010

ನಾನು, ನಿನ್ನ ಮಾತಿಗೊಮ್ಮೆ ಕವಿತೆ ಸ್ಪುರಿಸದಿರಲು ಏನು ಮಾಡಬೇಕು ಹೇಳು ಸಾಕು!

ಪ್ರೀತಿಯ ಫಲ್ಗುಣಿ,

ಮನೆಗೆ ಬಂದ ಮೇಲೆ ಮನಸಿನಲ್ಲಿ ನಿನ್ನ ಕನಸು ಕದ ಬಿಚ್ಚಿ ಕುಳಿತುಕೊಳ್ಳುತ್ತದೆ. ನಾನು ಮನೆಯ ಮುಂದಿರುವ ಜಗುಲಿಯಲ್ಲಿ ತೆಂಗಿನ ಗರಿಯ ನಡುವಿನ ನಡುವೆ ಇಣುಕುವ ಚಂದಿರನನ್ನು ನೋಡುತ್ತಾ ಮಲಗುತ್ತೇನೆ. ನನ್ನೊಳಗೆ ಕವಿತೆ ಜನಿಸುವ ಸಮಯ.

तेरी यादों में डूबे है हम,
अब सुबह शाम मेरे,
नींद तो जाती रही,
अब मेरे ख्वाब भी...!

ನಿನ್ನ ನೋಡುತ್ತಾ-ನೋಡುತ್ತಾ ನಾನು ಕವಿಯಾಗಿಬಿಟ್ಟೆನಾ ಎಂಬ ಶಂಕೆ ಹಾಗು ಸಣ್ಣ ಭ್ರಮೆ ನನ್ನದು! ಆಫೀಸಿಗೆ ದೀರ್ಘ ರಜೆ ಘೋಷಿಸಿ ಬಂದಿದ್ದೇನೆ. ಇನ್ನು ನಿನ್ನ ಕನಸು ಕಾಣುವ ಕಾಯಕ ನನ್ನದು!

ನನ್ನ ಮನೆಯಿಂದ ತುಸು ದೂರ ನಡೆದರೆ ನಿನ್ನ ಮನೆಯಿದೆ. ನಿನ್ನ ಮನೆಯ ನೆತ್ತಿಯ ಮೇಲೆ ಯಾವುದೋ ಚುಕ್ಕಿ, ನೀನು ನಕ್ಕಂತೆ ಮಿನುಗುತ್ತಿದೆ! ನಿನ್ನ ಮನೆಯ ಹಿಂದೆ ಫಲ್ಗುಣಿ ನದಿ ಹರಿಯುತ್ತದೆ. ನೀನೂ ಅಷ್ಟೆ ಕಣೆ ನದಿಯಂತೆ. ನನ್ನೊಳಗೆ ಮೆಲ್ಲನೆ ಹರಿಯುತ್ತೀಯ, ಗುಪ್ತಗಾಮಿನಿಯಂತೆ! ನನ್ನ ಊರು, ನಿನ್ನ ಮನೆ, ಮನೆಯ ಹಿಂದಿನ ನದಿ ಎಲ್ಲವೂ ನನ್ನ nostalgia ದ ಸಂಕೀರ್ಣದ ಹಾಗೆ ಕಾಣುತ್ತದೆ. ನಿನ್ನ ಮನೆಯ ದೊಡ್ಡ ಉಯ್ಯಾಲೆಯಲ್ಲಿ ನಾವಿಬ್ಬರೂ ಕುಳಿತು ಜೀಕುತ್ತಿದ್ದ ಸುಳಿಗಾಳಿಯಿದೆ, ನನ್ನ ,ಮನೆಯ ಅಂಗಳದಲ್ಲಿ ನೀನಿಟ್ಟ ಪುಟ್ಟ ಹೆಜ್ಜೆಯ ಗುರುತುಗಳಿದೆ. ನಾನು ಪ್ರತಿ ಬಾರಿ ನಗರದಿಂದ ಹಿಂತಿರುಗಿದಾಗಲೂ " ಫಲ್ಗುಣಿನ ಕರೆದುಕೊಂಡು ಬಂದ್ಯಾ..?" ಎಂದು ಅಮ್ಮ ಕೇಳುತ್ತಾರೆ. ಆ ಬಾರಿ ನನ್ನೊಡನೆ ನೀನಿರದ ದುಃಖ ನನಗೂ ಇದೆ. ಆದರೆ ನಾನೇನು ಮಾಡಲಿ? ನಗರದಿಂದ ಯಾವಾಗ ಮುಕ್ತನಾಗಿ ಊರಿಗೆ ಬಂದೇನು ಎಂದು ಮನಸ್ಸು ಚಡಪಡಿಸುತ್ತದೆ. ಊರಿನ ತುಂಬಾ ಚದುರಿದಂತ ಮನೆಗಳು, ಕಿಟಕಿಯ ಒಳಗೆ ಮೆಲ್ಲನೆ ನುಸುಳಿ ಬರುವ ಚಂದಿರ, ಮನೆಯ ಪಕ್ಕದ ಸಂಪಿಗೆ ಮರದ ಕೋಗಿಲೆ, ನಿನ್ನ ಮನೆಯ ಹಿಂದಿನ ನದಿ ತೀರ, ಎಲ್ಲಕ್ಕೂ ಮಿಗಿಲಾಗಿ ದೊರಕುವ ದಟ್ಟ ಏಕಾಂತ. ಏಕಾಂತದಲ್ಲಿ ನಾನು ಮೌನಿ, ನೀನು ಧ್ಯಾನಿ!!

ನಿನ್ನ ಮನೆಯ ಹಿಂದಿರುವ ಫಲ್ಗುಣಿ ನದಿ ತೀರದಲ್ಲಿ ನಮ್ಮ ಸಹಸ್ರ ನೆನಪುಗಳಿವೆ. ಮನಸ್ಸು nostalgic. ಇಲ್ಲೇ ಅಲ್ಲವ ಫಲ್ಗುಣಿ, ನಾವಿಬ್ಬರು ಶಂಕ-ಕಪ್ಪೆ ಚಿಪ್ಪುಗಳನ್ನು ಅರಸುತ್ತ ಕಳೆದದ್ದು, ದಂಡೆಯಲ್ಲಿ ಮರಳು ಗೂಡು ಕಟ್ಟುತ್ತ ಕುಳಿತಿದ್ದು, ಪಕ್ಕದ ಕಾಡಿನ ತುದಿಯಲ್ಲಿ ಸಿಕ್ಕ ನವಿಲುಗರಿಯನ್ನ ಪುಸ್ತಕದೊಳಗೆ ಮರಿಹಾಕಲು ಇರಿಸಿದ್ದು!! ನಮ್ಮ ಬಾಲ್ಯ, ತೀರ ನಿನ್ನೆ-ಮೊನ್ನೆ ಘಟಿಸಿದ ಹಾಗೆ ಭಾಸವಾಗುತ್ತದೆ. ಇನ್ನೆರಡು ದಿನ ಕಳೆದರೆ ಶನಿವಾರ. ನೀನಿಲ್ಲಿ ಪ್ರತ್ಯಕ್ಷಳಾಗುತ್ತೀಯ, ದೇವತಯ ಹಾಗೆ! ನೀನಿಲ್ಲಿ ಬಂದರೆ, ನದಿ ದಂಡೆಯಲ್ಲಿ ಭುಜ ಆನಿಸುತ್ತ ಮಾತನಾಡುತ್ತಿದರೆ, ನಾವು ಸರಿದ ದಾರಿಯೇಷ್ಟೋ, ಸುರಿದ ಮಾತುಗಳೆಷ್ಟೋ? ಸಂಜೆಯಲ್ಲಿ ನದಿಯ ಹರಿವೆ ಬೇರೆ. ನದಿಯ ನೀರಿನಲ್ಲಿ ಕಾಲಿರಿಸಿ ಕುಳಿತರೆ ನಿನ್ನ ಬೆಳ್ಳಿ ಗೆಜ್ಜೆಯ ಪಾದಗಳನ್ನು ಮುದಿಸುವ ಮೀನುಗಳಂತೆ ನಾನೂ ಮೋಹಗೊಳ್ಳುತ್ತೇನೆ. ನಿನ್ನ ಮೊಗದ ಮೇಲಿನ ತಿಳಿ ನೀರ ಪ್ರತಿಫಲನದಲ್ಲಿ, ಹಾಯುವ ಗಾಳಿಯಲ್ಲಿ, you look pretty-pretty! ನಾನು ಪ್ರತಿಬಾರಿಯೂ ನಿನ್ನ ಕಂಡು, ಅಚ್ಚರಿಗೊಂಡು, ಮೋಹಿತಗೊಳ್ಳುವ ಹುಡುಗನಂತೆ ತೊದಲುತ್ತೇನೆ. ಸುಮ್ಮನೆ ಇಳಿ ಬಿಟ್ಟ ನಿನ್ನ ಕೂದಲು ಆ ರೇಷ್ಮೆಯ ಕೆನ್ನೆಯ ಮೇಲೆ ಫಳ್ಳನೆ ಹೊಳೆಯುತ್ತದೆ. ನೀವು ಹುಡುಗಿಯರು ಏನು ಮಾಡಿದರೂ ಚೆಂದ ಕಾಣುತ್ತೀರಲ್ಲೇ? ನಾವಿಲ್ಲಿ ಹುಡುಗರು ಚೆಂದ ಕಾಣಲು ಏನೆಲ್ಲಾ ಮಾಡುತ್ತೇವೆ! ನಿನ್ನ ಕಿವಿಯ ಚಿನ್ನದ ಒಲೆಗಳು, ಮೂಗಿನ ಸಣ್ಣ ಮೂಗುತಿ, ಬಿಂದಿಯ ಕೆಳಗಿನ ದೇವರ ಕುಂಕುಮ, ನೀನು ನಕ್ಕಾಗ ತುಟಿಯ ಚಿಕ್ಕ ರೇಖು, ನಿನ್ನ ನೀಳ ಸಣ್ಣ ಬೆರಳು, ಆಗೊಮ್ಮೆ-ಈಗೊಮ್ಮೆ ತಂಗಾಳಿಗೆ ತಾಕುವ ನಿನ್ನ ಸೆರಗು, ನಿನ್ನ ನೀಲ ಕಣ್ಣು! You are irresistibly Beautiful ಕಣೆ! ನಾನು, ನಿನ್ನ ಮಾತಿಗೊಮ್ಮೆ ಕವಿತೆ ಸ್ಪುರಿಸದಿರಲು ಏನು ಮಾಡಬೇಕು ಹೇಳು ಸಾಕು!

ನೀನು ಬಂದ ಮೇಲೆ ಇದ್ದೆ ಇದೆ ಗೆಳತಿ, ನೀಲಧಿಯ ಚಂದ್ರ, ನಿನ್ನ ನೀಲಿ ಕಣ್ಣು, ತೇಲುವ ಚುಕ್ಕಿ, ನನ್ನ ಪ್ರೀತಿ, ಸ್ಪುರಿಸುವ ಕವಿತೆ, ನೀರಿನೊಳಗಣ ನಿನ್ನ ಬೆಳ್ಳಿ ಗೆಜ್ಜೆ, ಬೆರಗುಗೊಳ್ಳುವ ನನ್ನ ಮೋಹದ ಪರಿ! ನಿನ್ನೊಡನೆ ಮಾತನಾಡಲು ನೂರು ಮಾತಿದೆ ಗೆಳೆತಿ. ಅವೆಲ್ಲಾ ಎಲ್ಲಿ ಬರೆಯಲಿ, ಹೇಗೆ ಹೇಳಲಿ...?

-ನಿನ್ನವನು.

Wednesday, November 4, 2009

ನನ್ನೊಳಗೆ ಬೆಳಗುವುದು ನಿನ್ನ ಸ್ನೇಹದ ತಿಳಿ ನೀಲಾಂಜನ ಮಾತ್ರ!


ಅನುರೂಪದ ಗೆಳತಿ,
ನಗರದೊಳಗೆ ಹಬ್ಬದ ದಿಬ್ಬಣವೆಲ್ಲ ಮುಗಿದು ಸಣ್ಣಗೆ ನಿದಿರೆಗೆ ಜಾರುತ್ತಿದೆ. ಮನೆಯ ಮುಂದಿನ ಹೊಸ್ತಿಲ ಬಳಿಯಿರುವ ದೀಪಕ್ಕೆ ಸಣ್ಣ ಮಂಪರು. ನನ್ನೊಳಗೆ ನೂರು ಮತಾಪಿನ ಬೆಳಕು ಹಾಗು ನೆನಪಿನ ನೆರಳು-ಬೆಳಕಿನಾಟ! ಬೀದಿಯ ತುದಿಯಲ್ಲಿ ಯಾರೋ ಹೊಡೆದ ಪಟಾಕಿಯ ಸದ್ದು ಮೆಲ್ಲನೆ ಕ್ಷೀಣಿಸುತ್ತದೆ. ನೀನು ಮಾತ್ರ ನನ್ನೊಳಗೆ ಮಾಯದ ಗಾಯದಂತೆ ಉಲ್ಬಣಗೊಳ್ಳುತ್ತೀಯ! ನನಗೆ ಗೊತ್ತಿಲ್ಲ, ನಮ್ಮಿಬ್ಬರ ಇಪ್ಪತ್ತು ವರ್ಷಗಳ ಸಾಂಗತ್ಯದಲ್ಲಿ ನೀನು ನನ್ನೂಡನಿದ್ದರೂ, ತೀರ ನನಗೆ ನಾನೇ ಏಕಾಂಗಿಯಾಗಿ ಭಾಸವಾಗಿದ್ದು perhaps ಇದೆ ಮೊದಲು. ಇನ್ನು ನನ್ನ ಏಕಾಂಗಿತನವನ್ನು ಹವ್ಯಾಸವಾಗಿ, ರೂಢಿಗಳಾಗಿ, ದಿನಚರಿಗಳಾಗಿ ಅಭ್ಯಯಿಸಿಕೊಳ್ಳಬೇಕು. ಹಬ್ಬ ಮುಗಿದ ಮೇಲೆ ನನ್ನೊಳಗೆ ಇರುಳು ಸುರಿಯುವಂತೆ...

हे अँधेरा.....
झला दे मुझे...!!

ಮನಸ್ಸು ತೀರ nostalgic ಆಗಿ, retrospective ಆಗಿ behave ಮಾಡತ್ತೆ. ನನ್ನ ಬಳಿ ಉತ್ತರಗಳಿಲ್ಲ. ನಿನ್ನೊಡನೆ ಬಾಲ್ಯದಿಂದಲೂ ಆಟವಾಡುತ್ತ ಬೆಳೆದೆ ಎಂಬ ಕಾರಣಕ್ಕೋ ಏನೋ, ನೀನು ತೀರ ನನ್ನ ಪ್ರಾಣವೇ ಎಂಬಂತಾಗಿ ಹೋದೆ. ಅದೇನು ನನ್ನ ವೀಕ್ನೆಸ್ಸುಗಳೋ ಏನೋ ನನಗೆ ಗೊತ್ತಿಲ್ಲ, ಅಥವಾ ಈ ಹುಡುಗರ ಮನಸ್ಸೇ ಹೀಗೋ?! ನಾನು ಕಣ್ಣು ತೆರೆದರೆ ಕಾಣುತ್ತಿದ್ದಿದ್ದು ನಿನ್ನ ಮನೆಯ ಕಿಟಕಿ. ಮೇರೆ ಸಾಮನೇ ವಾಲೆ ಕಿಟಕಿಯಲಿ ಇದ್ದ ಚಾಂದ್ ಕ ತುಕುಡ..ಅದು ನೀನೆ! ನಿನಗೆ ಬೆಂಡೆಕಾಯಿ ಎಂದರೆ ಅಲರ್ಜಿ. ನಿನಗೆ ನಾನಿಟ್ಟ ಹೆಸರು 'ಬೆಂಡೆ ಕಾಯ್'.
ಶಾಲೆಯ ದಾರಿಯುದ್ದಕ್ಕೂ ನಡೆಯುವಾಗ ಮೂಡುತ್ತಿದ್ದ ನಿನ್ನ ಗೆಜ್ಜೆ ಸದ್ದಿನ ದನಿ ನನ್ನ ದನಿ ಪೆಟ್ಟಿಗೆಯೊಳಗಿರಬಹುದು! ಈಗಲೂ ನಿನ್ನ ಕೂಗಿ ಕರೆದರೆ ಅದೇ ಗೆಜ್ಜೆಯ ಸದ್ದು! ನಿನ್ನ ಕಾಲ್ಗೆಜ್ಜೆಗಳೆಂದರೆ ತುಂಬಾ ಇಷ್ಟವಾಗಿ ಬಿಟ್ಟಿದ್ದವು. ನೀನೆಷ್ಟು ಪ್ರಿಯವಾಗಿರಬೇಕು ಹೇಳು!
ಎಲ್ಲ ನೆನಪುಗಳೂ ಬೆಚ್ಚಗೆ ಇಟ್ಟುಕೊಂಡಿರುವೆ...ಕರಗದಂತೆ!

ಬಾಲ್ಯದಿಂದ ನಿನ್ನೊಡನೆ ಇದ್ದುಬಿಟ್ಟೆ ಎಂಬ ಸಲುಗೆಯೋ ಏನೋ, ಊರೊಳಗಿನ ಹಿನ್ನೀರಿನ ದೇಗುಲದ ಬಳಿ ಕುಳಿತು ಮಾತನಾಡುತ್ತಿದ್ದರೆ, ಪ್ರಪಂಚದ ಜನಸಂಖ್ಯೆ ಕೇವಲ ಎರಡು, ನಾನು-ನೀನು! ನಿನಗೆ ಮಾತನಾಡಲಿಕ್ಕೆ ನೂರು ವಿಷಯಗಳಿದ್ದವು, ಆದರೆ ನನಗಿದಿದ್ದು ಎರಡೇ ಕಿವಿ! ನಿನ್ನ ತಿಳಿಗೆನ್ನೆಯನ್ನು ನೋಡುತ್ತಾ ನೋಡುತ್ತಾ ಮೋಹದಲ್ಲಿ ಬಿದ್ದು ಬಿಡುತ್ತೇನ ಅನ್ನಿಸುತ್ತಿತ್ತು. ಮನಸ್ಸು ಮಾಡುವ ಚಡಪಡಿಕೆಗಳೇ ಹೀಗೆ. ಎಲ್ಲ ಹುಚ್ಚುತನಗಳ ಸಂಕಲಿಸಿದರೆ ನಾನಾಗುತ್ತೀನ? ಅದು ಪ್ರೀತಿಯೆನ್ನುತ್ತಿರಲಿಲ್ಲ, ನೀನು ನನ್ನೊಡನೆ ಇದ್ದೆ ಇರುತ್ತೀಯ ಎಂಬ ಹುಚ್ಚು ನಂಬಿಕೆ ಇತ್ತು. ನಮ್ಮ ಸ್ನೇಹ ಕೇವಲ ಸ್ನೇಹವಾಗಿರದೆ ಮತ್ತೇನೋ ಆಗಿತ್ತು. ಆ ಬಂಧಕ್ಕೆ ನನ್ನ ಬಳಿ ಹೆಸರಿಲ್ಲ ಗೆಳತಿ. ಒಲುಮೆಯೆನ್ನು, ಸ್ನೇಹವೆನ್ನು, ಸಲುಗೆಯೆನ್ನು. ಮತ್ತೇನೋ ಅದು! ನೀನಾದರೂ ಯಾವ ಹೆಸರು ಕೊಡುತ್ತಿದ್ದೆ ಹೇಳು?!

ಮುಂದಿನ ಫಾಲ್ಗುಣ ಕಳೆದರೆ ನಿನ್ನ ಮದುವೆಯ ಸುದ್ಧಿ. ಸಂತಸ ಪಡಲಿಕ್ಕೆ ಬೇರೇನು ಕಾರಣ ಬೇಕು? ಇಷ್ಟು ವರ್ಷಗಳ ಒಡನಾಟವೋ ಏನೋ, ನೀನು ನನ್ನ ಭಾಗವೇ ಆಗಿಬಿಟ್ಟಿದ್ದೆ. ನಾವಿಬ್ಬರೂ ಒಟ್ಟಿಗೆ ಆಚರಿಸಿದ ಕೊನೆಯ ದೀಪಾವಳಿಯೋ ಏನೋ? ನೂರು ದುಃಖಗಳು ಉಮ್ಮಳಿಸಿ ಬರುತ್ತದೆ, But,the life has to move on. ನಮ್ಮ ಒಡನಾಟ , ಆ ಬಾಲ್ಯ, ನಿನ್ನ ಕಾಲ್ಗೆಜ್ಜೆ, ಮುಂಗುರುಳು, ನಿನ್ನ ಕೆನ್ನೆ, ನನ್ನ ಮೋಹ ಎಲ್ಲವೂ Black and white ಫ್ರೇಮಿನಲ್ಲಿ ಮಂದಗತಿಯಲ್ಲಿ ಚಲಿಸುವ ಹಾಗೆ ಭಾಸವಾಗುತ್ತದೆ. ಎಂದೋ ಮುಗಿಯುವ ಸುಖಕ್ಕೆ ಮನಸ್ಸು ಇಂದೇ ಕೊರಗುತ್ತದೆ. ನಾನು ನಿನ್ನ ಗೆಳೆಯ ಎಂಬ ಕಾರಣಕ್ಕೆ ಸಂತಸಪಡಬೇಕೋ ಅಥವ ಕೇವಲ ನಿನ್ನ ಗೆಳೆಯನಾಗಿ ಮಾತ್ರ ಇರಬಲ್ಲೆ ಎಂಬ ಕಾರಣಕ್ಕೆ ದುಃಖಿಸಬೇಕೋ ತಿಳಿಯುತ್ತಿಲ್ಲ! ಪ್ರತಿ ದುಖದಲ್ಲೂ ಸಂತಸವಿರುವಂತೆ, ಪ್ರತಿ ಸಂತಸದಲ್ಲೂ ದುಖವಿರುತ್ತದಂತೆ, ಹೌದ? ಗೊತ್ತಿಲ್ಲ. ನಾಳೆ ಆ ಹಿನ್ನೀರಿನ ದೇಗುಲದ ಬಳಿ ಮಾತನಾಡಲು ನೀನಿರುವುದಿಲ್ಲ, ಕಾರ್ತಿಕದ ದೀಪಾವಳಿಗೆ ಸಂಬ್ರಮಿಸಲು ನೀನಿರುವುದಿಲ್ಲ, ಆದರೆ ನನ್ನೊಳಗೆ ಬೆಳಗುವುದು ನಿನ್ನ ಸ್ನೇಹದ ತಿಳಿ ನೀಲಾಂಜನ ಮಾತ್ರ!

- ಪ್ರೀತಿಯ ಗೆಳೆಯ.

Monday, August 31, 2009

ನಿನ್ನ ನೆನಪಿನ ಕಾಮನಬಿಲ್ಲಿನ ತುದಿಗೆ...


ಪ್ರೀತಿಯ ಗೆಳೆಯ,

ಬೆಳಿಗ್ಗೆ ಕಣ್ಣು ತೆರೆಯುತ್ತಲೇ ರಾತ್ರಿಯಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ. ರಾತ್ರಿಯೆಲ್ಲಾ ನಿನ್ನ ಕನಸು! ಮಳೆ ಸುರಿದಂತೆ! ಮನೆಯೊಳಗೆ ಮಳೆ ತಂದ ತಂಗಾಳಿಯ ಹಾಡು, ಮನೆಯೊಳಗೆ ಜಗುಲಿಯ ಬಳಿ ಹರಡಿದ ಶ್ರೀವಲ್ಲಿ ಗಿಡದ ಹೂವಿನ ಘಮ. ನೀನಿಲ್ಲದೆ ಬೇಸರಿಕೆಯ ಆಲಸ್ಯ. I'm dazed! ಸುಮ್ಮನೆ ಕಿಟಕಿಯ ಬಳಿ ನಿಂತು ಬಿಡದಂತೆ ಬೀಳುತ್ತಿರುವ ಮಳೆಯನ್ನು ನೋಡುತ್ತಾ ನಿಲ್ಲುತ್ತೇನೆ. ನೀನು ಕಳೆದವಾರ ನಿನ್ನ ಗೆಳೆಯನ ಮನೆಯಿಂದ ತಂದಿದ್ದ ಲಿಲ್ಲಿ ಗಿಡದ ಎಲೆಗಳಿಗೆ ತಣ್ಣೀರ ಶುಭಾಸ್ನಾನ. ನೀನಿದ್ದರೆ ಇಲ್ಲಿ, ನಿನ್ನ ಬೆಚ್ಚನೆ ಭುಜಕ್ಕೆ ಆನಿಸಿಕೊಂಡು, ನಿನ್ನ ಮೆಲ್ಲನೆ ಅಪ್ಪಿ ಹಿಡಿದರೆ, ನಿನ್ನ ಮೌನದಲ್ಲಿ ಮಾತಿನ ಸೊಬಗು.

इस तनहाई में
तेरा ही बात हो,
नींदों में तेरा याद....

ಭಾನುವಾರ ಇಂತಹ ಸಣ್ಣ ಸಣ್ಣ ಸುಖಗಳಿಗೆ ಮನಸ್ಸು ಹಾತೊರೆಯುತ್ತದೆ. ನಿನ್ನ ಬೆಚ್ಚನೆ ಅಪ್ಪುಗೆ, ಕೆನ್ನೆಯ ಹೂ ಮುತ್ತು, ತುಟಿಯಲ್ಲಿ ನಿನ್ನ ಪ್ರೀತಿಯ ಗುರುತು! No compromise! ನನ್ನಂಥ ಮಾತಿನ ಬೊಂಬೆಯೊಂದಿಗೆ ಹೇಗಿದ್ದೆಯೋ ಹುಡುಗ ನೀನು? ನನ್ನ ಕಾಲ ಗೆಜ್ಜೆಯಲ್ಲಿ, ನನ್ನ ಕೈಯ ಬಳೆಗಳಲ್ಲಿ ನಿನ್ನದೊಂದು ದನಿಯಿದೆ. ನಿನ್ನ ಕಿರುನೋಟದಲ್ಲಿ ಯಾವುದೋ ವ್ಯಾಮೋಹವಿದೆ. I'm just unfathomed.ಇಂಥಹ ಛೋಟಿ ಛೋಟಿ ವಿಷಯಗಳಲ್ಲಿ ಏನೋ ಸಂತಸವಿದೆ. ನೀನಿಲ್ಲದೆ, I'm missing you! ರಾತ್ರಿ ಸುಹಾಸಿನಿ ಫೋನ್ ಮಾಡಿ ನೀನಲ್ಲಿ ಹೈದರಾಬಾದ್ ಗೆ ತಲುಪಿದ ವಿಷಯ ತಿಳಿಸಿದಳು. ನೀನಾದರು, ಒಂದು ಫೋನ್, ಒಂದು SMS ಕಳುಹಿಸಬಾರದಿತ್ತಾ? ಗಳಿಗೆಗೊಮ್ಮೆ ಮೊಬೈಲ್ ತೆಗೆದು ನೋಡುತ್ತೇನೆ ನಿನ್ನ ವಿಷಯ ಏನಾದರು ಇದೆಯಾ ಎಂದು....

कुछ पल तू भी
मेरा याद करना..
ज़रा, मेरे जैसा...!!

ಹೊರಗೆ ಮಳೆ ನಿಲ್ಲುವ ಯಾವುದೇ ಸೂಚನೆಯಿಲ್ಲ. ಬಾಗಿಲು ತೆರೆದು ಮಳೆಯ ಸಣ್ಣ ಇರಚಲಿಗೆ, ಕಾಫಿಯ ಹಬೆಗೆ ಮುಖವೊಡ್ಡಿ ನಿಂತಿದ್ದೇನೆ. ಮನೆಯ ಮುಂದೆ ಹರಿಯುತ್ತಿರುವ ಮಳೆಯ ನೀರಿನಲ್ಲಿ ಯಾರೋ ಮಾಡಿಬಿಟ್ಟ ಕಾಗದದ ದೋಣಿ. ನಾವಿಬ್ಬರೂ ಬಾಲ್ಯದಲ್ಲಿ ಮಾಡಿಟ್ಟುಕೊಳ್ಳುತ್ತಿದ್ದ ಕಾಗದದ ದೋಣಿಗಳು ನೆನಪಾಗುತ್ತದೆ. ನೀನು ಯಾವುದೋ ವಿಚಿತ್ರ ಆಕಾರದ ದೋಣಿಗಳನ್ನು ಮಾಡಿಕೊಡುತ್ತಿದ್ದೆ. ನೀನು ಆಗಾಗ ಹೇಳುತ್ತಿದ್ದ ಗುಬ್ಬಿಯ ಕಥೆಗಳು ನನಗಿನ್ನೂ ನೆನಪಿದೆ. ಅವೆಲ್ಲ ನಿನಗೆ ಅಜ್ಜಿ ಹೇಳಿದ ಕಥೆಗಳು. ನಮ್ಮ ಸ್ನೇಹಕ್ಕೆ ಯಾವ magnitude ಇತ್ತು ಹೇಳು? ನಿನ್ನೂಡನಿರುತ್ತಿದ್ದ ಸುಧಿ, ಹರ್ಷ, ಗಂಗಾಧರ ಇವರೆಲ್ಲ ನಂಗೂ ಸ್ನೇಹಿತರೆ. ಆದರೆ ನಿನ್ನೆಡೆಗಿದ್ದ ಸ್ನೇಹದ ಪರಿಯೇ ಬೇರೆ. ನಿನ್ನ ಬೆನ್ನಿಗಂಟಿದಂತಿದ್ದ ನನಗೆ, ನಿನ್ನ ತಿಳಿ ಹುಬ್ಬು, ಮಂದಹಾಸ, ನಿನ್ನ ಮೌನ ವನ್ನೂ ಮೀರಿ ನಿನ್ನ ಇಷ್ಟಪಡಲಿಕ್ಕೆ ನನ್ನ ಬಳಿ ನೂರು ಕಾರಣಗಳಿತ್ತು. And you was decent! ನನ್ನ ಅಂಗೈಯೊಳಗೆ ಅನುರಾಗದ ರೇಖೆಗಳನ್ನು ಮೂಡಿಸಿದವನು ನೀನು ಶಮಂತ್. ಮುಂದಿನ ತಿಂಗಳ ಶ್ರಾವಣಕ್ಕೆ ನಮ್ಮಿಬ್ಬರ ಮದುವೆಯಾಗಿ ಸರಿಯಾಗಿ ಒಂದು ವರ್ಷ. How soon!

ಮತ್ತೆ ನೀನು ಹಿಂದಿರುಗುವ ವಿಷಯವನ್ನು ಯಾವುದೋ ತಂಗಾಳಿ, ನೀಲಿ ಮೋಡಗಳು ಹೇಳಬೇಕಿಲ್ಲ. ಒಂದು ಫೋನು ಮಾಡಿದರೆ ಎದೆಯಲ್ಲಿ ನೂರು ಹಣತೆಗಳು! ಅಲ್ಲಿ, ನೀನಿರುವ ಊರಿನಲ್ಲಿ ಚಳಿಯೋ, ಮಳೆಯೋ? ನಾನಿಲ್ಲದೆ ನಿನಗೆ ಏನು ವ್ಯಥೆಯೋ?! Take care ಕಣೋ ಮುದ್ದು ಕೋತಿ.

ಹೊರಗೆ ಮಳೆ ನಿಂತಿರುವ ಗುರುತು. ಗೋಡೆಯ ನಿನ್ನ ಚಿತ್ರಪಟದಲ್ಲಿ ನೀನು ನಗುವ ಮೆಲುದನಿ! ನಾನಿಲ್ಲಿ, ನಿನ್ನ ನೆನಪಿನ ಕಾಮನಬಿಲ್ಲಿನ ತುದಿಗೆ ಹೊರಟಿದ್ದೇನೆ....

- ನಿನ್ನವಳು. .

Wednesday, August 19, 2009

ನಿನ್ನ ಕನಸಿನ ಕಣಿವೆಗೆ ಸೇರುವ ತವಕ ನನ್ನದು...


ನಲ್ಮೆಯ ಗೆಳತಿ,

ನಿನ್ನ ನೆನಪು ಮನಸಲ್ಲಿ ಕದ ತಟ್ಟಿ ನಿಂತಿದೆ. ಬಾಗಿಲ ಬಳಿ ನೀನು ಬಂದಂತೆ ಭಾಸ. ಹೊರಗೆ ಸುರಿದು ಹೋದ ಮಳೆಗೆ ಮೋಡದ ಹಂಗಿಲ್ಲ. ಮನೆಯ ಮುಂದಿನ ಹೊಂಗೆಯಲ್ಲಿ ಮಳೆ ಹನಿಗಳು ಅವಿತು ಕುಳಿತಂತೆ ಕುಳಿತಿದೆ. ಸುಮ್ಮನೆ ನಿನ್ನ ಮನೆಯ ಕಿಟಕಿಯತ್ತ ನೋಡುತ್ತೇನೆ, ನೀನು ಕಾಣಬಹುದೆಂದು! ಹೊರಗಿನ ಮಳೆಗೆ ಮನೆಯ ಒಳಗೆ ಹರವಿದ ನಿನ್ನ ಹಸಿರು ಬಣ್ಣದ ದುಪಟ್ಟ ಕಾಣುತ್ತದೆ ಅಷ್ಟೇ. ನನ್ನ ಗಿಜಿಗಿಡುವ ಆಫೀಸು, ಸಂತೆಯೊಳಗಿನ ಊರು, ಹೆಸರಿಲ್ಲದ ನನ್ನ ಏಕಾಂತ ಮನೆಯಲ್ಲಿ ನನಗೆ ಕಾಣುವುದು, ನೀನು ಹಾಗು ನಿನ್ನ ನೆನಪು! ನಿನಗಾದರು ನನ್ನ ಮೇಲೆ ಸಣ್ಣ ಕರುಣೆ ಇರಬೇಕಿತ್ತು. ನನ್ನನ್ನು ಇಲ್ಲಿ ಏಕಾಂಗಿಯಾಗಿ ಬಿಟ್ಟು, ನಿನ್ನ ಯಾವುದೋ ಪುರಾತನ ಗೆಳೆತಿಯ ಅಕ್ಕನ ಮದುವೆಗೆ ಯಾಕಾದರೂ ಹೋಗಬೇಕು?! ನಾನು ಮನೆಯ ತುಂಬಾ lonely lonely! And, I feel so helpless! ನೀನು ಹೋಗುವಾಗ ನೀಡಿದ ಪುಟ್ಟ ಮುತ್ತು ನನ್ನ ಒಂದು ರಾತ್ರಿ ಗೂ ಸಾಲುವುದಿಲ್ಲ! ಇನ್ನು, ಮೂರು ದಿನಗಳನ್ನು ಹೇಗೆ ತಳ್ಳಲಿ?!

याद है तेरा,
दीप जैसे जलता...
फिर भी मेरा
अकेलापन का अँधेरा
आँखों से नहीं मिटता..!!

ನನಗಿನ್ನೂ ನೆನಪಿದೆ. ನನ್ನ ಆಫೀಸಿನ ಮೊದಲ ದಿನ ನೀವೆಲ್ಲ ನೀಡಿದ್ದ welcome party ಯಲ್ಲಿ ಗುಲಾಬಿ ಹೂವಿನ bouquet ನೀಡಿದವಳು ನೀನು. ನಿನ್ನ ಸೌಮ್ಯ ನೀಲಿ ಸಲ್ವಾರ್ ನಲ್ಲಿ,you was looking fashionable and peachy! ನಿನ್ನ ಸಣ್ಣ ಮಂದಹಾಸದಲ್ಲಿ ಏನಿತ್ತು, ಏನಿರಲಿಲ್ಲ? I dare to guess! ಆದರೂ ನನಗೆ ಹುಡುಗಿಯರ ಮನಸ್ಸು ಬಹು ಬೇಗ ಅರ್ಥವಾಗಿಬಿಡುತ್ತದೆ. ಅಮ್ಮನ ಸಾಲು ಸಾಲು ಕಷ್ಟಗಳು, ಹೇಳದೆ ನುಂಗಿಬಿಡುತ್ತಿದ್ದ ನೋವು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಪುಟ್ಟ ತಂಟೆ ತಂಟೆ ತಂಗಿಯ ಅಕ್ಕರೆ, ಓರಗೆಯ ಗೆಳತಿಯರ ಮೌನದ ಮಾತುಗಳು ಅರ್ಥವಾಗಿಬಿಡುತ್ತಿದ್ದವು. I am a good listener. ಇದು ನನ್ನ ಮೇಲಿರುವ compliment ಉ ಹೌದು, complaint ಉ ಹೌದು!

ನನಗೆ ನಿನ್ನ ಕೆಲಸದಲ್ಲಿನ candidness ತುಂಬಾ ಇಷ್ಟವಾಗಿಬಿಟ್ಟಿತು. ನೀನು, ನಿನ್ನ cabin ಒಳಗೆ ಕೇಳಿಯೂ ಕೇಳದಂತೆ ಗುನುಗಿಕೊಳ್ಳುತ್ತಿದ್ದ ಶಾಯರಿಗಳು ಇಷ್ಟವಾಗುತ್ತಿದ್ದವು. ನಿನ್ನ ಸುಮ್ಮನೆ ನೋಡಿದರೆ ಸಾಕು, ನಿನ್ನ ಕಣ್ಣುಗಳು ಇಷ್ಟಗಲ ನಗುತ್ತಿದ್ದವು. ನೀನು ಯಾವುದೋ ಮಲ್ಲಿಗೆಯ ನೀರಿನಲ್ಲಿ ಮಿಂದೆದ್ದು ಬಂದವಳಂತೆ ನಿನ್ನ ಬಳಿ ಘಮ ಇರುತಿತ್ತು. ಇವೆಲ್ಲ ನನಗೆ ತಿಳಿದೂ ತಿಳಿಯದಂತೆ ಇಷ್ಟವಾಗಿಬಿಟ್ಟಿತ್ತು. ಬಹುಷಃ ನಿನ್ನ ಪಾದದ ಕಿರುಗೆಜ್ಜೆಯಲ್ಲಿ ಯಾವುದೋ ಮೋಹದ ಲಾಸ್ಯವಿದೆ. And you was captivating! ಒಂದು ಬಿಡುವಿನ ವೇಳೆಯಲ್ಲಿ ಸುಮ್ಮನೆ ಬರೆದ ಕವನವನ್ನು ಎಲ್ಲರಿಗೂ mail ಮಾಡಿದ್ದೆ. ಕವನಗಳೆಂದರೆ ನಿನಗೆ ಬಹ ಇಷ್ಟ ಎಂದು ತಿಳಿದಿದ್ದೆ ಅಂದು.

ನಿನ್ನ ನೆನಪಿನ ಮೆರವಣಿಗೆ
ಹೊರಟಿದೆ ಕನಸಿನ ಊರಿಗೆ,
ಬಂದುಬಿದಲೇ ಒಮ್ಮೆ ನೀನು
ಕರೆಯದೆ ಮಾಡಿದ ಕರೆಗೆ...?!
........................

ನಿನ್ನ ಮನೆಯಿರುವುದು ನಾನಿರುವ ಬೀದಿಯ ತುದಿಯಲ್ಲೇ ಎಂದು ತಿಳಿಯಲು ವಾರಗಳೇ ಕಳೆಯಿತೇನೋ? Better late than never! ನಿನಗೆ ಕಂಬಾರರ ಸಾಹಿತ್ಯ ಇಷ್ಟವಾಗಿತಿತ್ತು. ನಾನು ಆಗೊಮ್ಮೆ-ಈಗೊಮ್ಮೆ ಬರೆಯುತ್ತಿದ್ದ ಕವನಗಳನ್ನ ಜತನದಿಂದ ಓದುತ್ತಿದ್ದೆ. ನಿನ್ನ ಹುಬ್ಬಿನ ಮೇಲೆ ಚಾಚಿದಂತ ನಿನ್ನ ನೀಲ ಮುಂಗುರುಳು, ತಿಳಿ ಹಾಲಿನ ಕೆನ್ನೆ, ಸಣ್ಣ ಮೂಗುತಿ, ಎಡ ಗಲ್ಲದ ಬಳಿ ಕಾಣದಂತೆ ಇದ್ದ ಸಣ್ಣ ಮಚ್ಚೆ, ನಿನ್ನ ಮೃದು ಪಾದದೊಳಗಿನ ಸಣ್ಣ ಗೆಜ್ಜೆ, ಹೂವಿನಂಥ ಕಣ್ಣುಗಳು...ನಿನ್ನ ಇಷ್ಟ ಪಡಲಿಕ್ಕೆ ಸಾವಿರ ಕಾರಣಗಳಿದ್ದವು. ಆದರೆ ನನ್ನ ಪ್ರೀತಿಗೆ ಕಾರಣಗಳಿರಲಿಲ್ಲ. I was reasonless! ನಿನ್ನೊಡನೆ ನಿನ್ನ scooty ಯಲ್ಲಿ ಹೋಗುವಾಗ ನಿನ್ನ ಕಿವಿಯಲ್ಲಿ ಮೆಲ್ಲನೆ ನನ್ನ ಪ್ರೀತಿಯ ಹೇಳಿದ್ದೆ. ನೀನು, ನನ್ನ ಮೆಚ್ಚಲಿಕ್ಕೆ ಸಾವಿರದ ಒಂದು ಕಾರಣಗಳಿದ್ದವು. ಅದು ನನಗೆ ತಿಳಿದಿಲ್ಲ, ಅಷ್ಟೇ! ಕಳೆದ ತಿಂಗಳು ಊರಿಗೆ ಹೋದಾಗ ತಂಗಿಗೆ ನಿನ್ನ ಫೋಟೋ ತೋರಿಸಿದ್ದೆ. ನಾನು ಹೊರಡುವ ವರೆಗೂ ರೇಗಿಸಿದ್ದಳು.

ಇಂದು ಆಫೀಸಿನಿಂದ ಹಿಂದಿರುಗಿದವನಿಗೆ ಮನೆಯಲ್ಲಿ ಗಾಢ ಮೌನದ ಅರಿವು. ನೀನಿರುತ್ತಿದ್ದರೆ ಎಷ್ಟೆಲ್ಲ ಮಾತಿರುತಿತ್ತು, ಅಲ್ಲ್ವಾ? ನೀನೆಂದೋ ಕೊಟ್ಟಿದ್ದ ಗಜಲ್ ನ ಸಿಡಿ ಯನ್ನ stereo ಗೆ ಹಾಕಿ ಮೆಲ್ಲನೆ ನಿದ್ರೆಗೆ ಜಾರುತ್ತೇನೆ. ನೆನಪಿನ ನೌಕೆಯಲ್ಲಿ, ನಿನ್ನ ಕನಸಿನ ಕಣಿವೆಗೆ ಸೇರುವ ತವಕ ನನ್ನದು...

-ನಿನ್ನವನು.

Friday, June 26, 2009

ಮಂತ್ರಗಳ ಸ್ವರದ ಏರಿಳಿತದಲ್ಲಿ ನೀನೆ-ನೀನು..


ಮುದ್ದು ಹುಡುಗಿ,

ಅಮೋಘ ಇಪ್ಪತ್ತನಾಲ್ಕು ವರ್ಷಗಳಿಂದ ಘೋರ ಬ್ರಹ್ಮಚರ್ಯ ಪಾಲಿಸುತ್ತಿದ್ದ ನನಗೆ, ನಿನ್ನ ನೋಡಿದಂದಿನಿಂದ ಎದೆಯೊಳಗೆ ಯಾವುದೋ ಹಕ್ಕಿಯ ಗೂಡು, ಮೆಲ್ಲನೆ ಚಿಲಿಪಿಲಿಯ ಹಾಡು. ಇಷ್ಟು ವರ್ಷ ನನ್ನ ಕಣ್ಣಿಗೆ ಒಮ್ಮೆಯೂ ಬಾರದಂತೆ ಎಲ್ಲಿದ್ದೆ ನೀನು! ಇತ್ತೀಚಿಗೆ ಘಟಿಸಿದಂತೆ, ವಾರಗಳ ಹಿಂದೆ ನಿನ್ನನ್ನು ನೋಡಿರಬಹುದು ಅಷ್ಟೇ...! ನೀನು, ನನ್ನನ್ನು ತೀರ ಈ ಪರಿಯಾಗಿ ಕಾಡಬಹುದು ಎಂದು ನಾನೂ ಊಹಿಸಿರಲಿಲ್ಲ! ಚಂದಿರ ನಕ್ಕಂತ ನಗು, ಮೊನ್ನೆ ಗೆಳೆಯರೊಡನೆ ಜೋಗ ಜಲಪಾತಕ್ಕೆ ಹೋದಾಗ ಜಲಪಾತದಲ್ಲಿ ಕಂಡಿದ್ದು ಬಹುಷಃ ನಿನ್ನದೇ ಕಣ್ಣಿನ ಆಳ, ತುಟಿಯಲ್ಲಿನ ಇಬ್ಬನಿ, ಮುಖವರಳಿಸಿ ನಕ್ಕರೆ ಮೆಲ್ಲನೆ ತಲೆದೂಗುವಂತೆ ನಿನ್ನ ಕಿವಿಯೋಲೆಗಳು, ರಾಘವೇಂದ್ರ ಸ್ವಾಮಿ ಮಠದ ಮುಂದೆ ಕೈ ಜೋಡಿಸಿ, ಬಿಗಿಯಾಗಿ ಕಣ್ಣು ಮುಚ್ಚಿ ಪ್ರಾರ್ಥಿಸುತ್ತ ನಿಂತಿದ್ದರೆ, ನಿನ್ನದು ಯಾವ ನಾಟ್ಯದ ಭಂಗಿ?! ನಾನಾಗಬಾರದಿತ್ತೆ ರಾಘವೇಂದ್ರ ಸ್ವಾಮಿ!! ನಿನ್ನ ಸ್ಕೂಟಿಯಲ್ಲಿ ಹಕ್ಕಿಯಂತೆ ಹೊರಟರೆ, ಮಠ ಬೀದಿಯ ತುದಿ ಕಾಣುವವರೆಗೂ ನಿನ್ನನ್ನೇ ದಿಟ್ಟಿಸುತ್ತೇನೆ , And you look damn cute! ' ಹುಡುಗಿ, ಎಷ್ಟು ಚೂಟಿಯಾಗಿದ್ದಾಳೆ ಅಲ್ಲವಾ...?' ಎಂದರೆ ಗೆಳೆಯರೆಲ್ಲ ' ಲೋ ವಿಶ್ವಾ...' ಎಂದು ನನ್ನನ್ನೇ ದಿಟ್ಟಿಸುತ್ತಾರೆ. ಇವರಿಗೆ ಯಾವ ಸುಳಿವು ಸಿಕ್ಕಿತೋ?!

ಇಲ್ಲಿ, ಮಠ ಬೀದಿಯ ತುದಿಯಲ್ಲಿ ನಾಟ್ಯ ಶಾಲೆಯಿದೆ ಎಂದು ತಿಳಿದಿದ್ದೇ ನೀನಲ್ಲಿ ಭರತನಾಟ್ಯ ಕಲಿಯಲು ಬರುತ್ತೀಯ ಎಂದು ತಿಳಿದಾಗ! ಸಂಜೆ, ನನ್ನ ವೇದಗಳ ಅಭ್ಯಾಸ ಮುಗಿಸಿ ವೇದ ಪಾಠ ಶಾಲೆಯಿಂದ ಹೊರ ಬಂದವನಿಗೆ ಕಂಡವಳೇ ನೀನು. ನಿನ್ನನ್ನು ಊರಿನಲ್ಲಿ ನೋಡಿದ್ದೇ ವಾರಗಳ ಹಿಂದೆ. ಸುಝುಕಿಯಲ್ಲಿ ಸುಮ್ಮನೆ ಎಲ್ಲೊ ಹೊರಟಿದ್ದಾಗ ರಸ್ತೆಯ ನಡುವೆ ನಿನ್ನ ಎಲ್ಲೊ ಗಮನಿಸಿದ್ದೆ. " ಯಾರೋ ಸುಬ್ಬು...ಹುಡುಗಿ ಮುದ್ದಾಗಿದ್ದಾಳೆ.." ಎಂದಿದ್ದೆ. ' ಏನು ವಿಶ್ವಾ...ವಿಷ್ಯ...' ಎಂಬಂತೆ ಕಣ್ಣಲ್ಲೇ ಕೇಳಿದ್ದ. ಸುಬ್ರಮ್ಹಣ್ಯ ಭಟ್ ಹುಡುಗಿಯರ detailed database! ಪ್ರವರದಂತೆ ಎಲ್ಲಾ ಒಪ್ಪಿಸಿದ್ದ. ಹೆಸರೇ ಚಂದ್ರಿಕಾ, ಮನಸ್ಸು ಹಾಲು ಬೆಳದಿಂಗಳು! ನಾನಿಲ್ಲಿ ಪಾಠಶಾಲೆಯಲ್ಲಿ ವೇದಾದ್ಯಯನ ಮಾಡುತ್ತಿದ್ದರೆ ನನ್ನ ಮಂತ್ರೋಕ್ತಿಗಳಲ್ಲೆಲ್ಲಾ ನೀನೆ ನೀನು! ನನ್ನ ನೋಡಿಯೂ ನೋಡದಂತೆ ಮಾಡಿ ಸುಮ್ಮನೆ ಕಿರುನಗೆ ಬೀರಿದರೆ, ಮನಸ್ಸು... ' ಓಂ ಶಾಂತಿ ಶಾಂತಿ ಶಾಂತಿ...' !

'ಇವನ್ಯಾರೋ ಹುಡುಗ..ಸುಮ್ಮನೆ ದಿಟ್ತಿಸುತ್ತಾನಲ್ಲಾ...' ಅಂದುಕೊಂಡರೆ ಅದು ನಾನೇ ಕಣೆ ಹುಡುಗಿ! ಇಂದು ಹೊರಗಡೆ ಜೋರು ಮಳೆ. ನಿನ್ನ ನೋಡುವ ಯಾವ ಸುಳಿವೂ ಇಲ್ಲ. ನಾಳೆ ವೇದಾಭ್ಯಾಸದ ನೆಪದಲ್ಲಿ ನಿನ್ನನ್ನೇ ನೋಡಲು ಬರುತ್ತೇನೆ. ಮಂತ್ರಗಳ ಸ್ವರದಲ್ಲಿ, ಸ್ವರಗಳ ಏರಿಳಿತದಲ್ಲಿ, ನಿನ್ನನ್ನೇ ಕರೆದರೂ ಕರೆಯುತ್ತೇನೆ! ಮನೆಗೆ ಹೋಗುವ ದಾರಿಯಲ್ಲಿ, ನಿನ್ನ ಕುಡಿನೋಟದಲ್ಲಿ ನನ್ನನ್ನೇ ನೋಡುತ್ತಿರು, ಗೆಳತಿಯರನ್ನು ನೋಡಿದಂತೆ ಮಾಡಿ, ಒಂದು ಸಣ್ಣ ನಗೆ ನೀಡುತ್ತಿರು, ತೀರ ಪ್ರೇಮವೆಂಬ ಪ್ರೇಮದಲ್ಲಿ ಬಿದ್ದರೂ ಬಿದ್ದೇನು! ಬೆಳಗೆದ್ದರೆ, ಆಫೀಸು , ಕೆಲಸ ಇದ್ದಿದ್ದೇ. ಇರಲಿ, ನನ್ನಲ್ಲೂ-ನಿನ್ನಲ್ಲು ಒಂದಷ್ಟು ಪ್ರೇಮ ಕಥೆ. ಒಂದು ಆಷಾಢದ ಸಂಜೆಯಲಿ, ತಿಳಿಗಾಳಿ ಬೀಸುವಾಗ, ನನ್ನ ಪ್ರೀತಿ ನಿವೇದಿಸಿಕೊಂಡರು ನಿವೇದಿಸಿಕೊಂಡೇನು...!!
- ನಿನ್ನವನು.