Friday, September 26, 2008

ಮುನ್ನುಡಿ-ಹಿನ್ನುಡಿಯ ನಡುವೆ...

ಗೆಳತಿ,
ಬೆಳಗಿನಿಂದ ನಿನ್ನದೇ ನೆನಪು. ಇಲ್ಲೆಲ್ಲಾ ಮಳೆಯಾಗಿದೆ.ತಕ್ಷಣ ನೆನಪಾಗಿದ್ಧು ನೀನೆ. ಈ ಹಬ್ಬದ ಅಬ್ಯಂಜನ ಸ್ನಾನ ಮುಗಿಸಿ ಹೊರ ಬಂದವನ ಮೈಯಿಂದ ಎದ್ದ ಹಸೀ ಸೀಗೆಯಾ ಘಮ. ಕೊಡವಿದ ತಲೆ ಕೂದಲಿಂದ ಸಿಡಿಯುವ ಮಂಜಿನ ಹನಿ! ಈ ಸಲದ ಮಳೆಗೆ ಯಾವುದೋ ಚ್ಯತನ್ಯ. ಅಂಗಳದಲ್ಲಿ ಧೋ... ಬೀಳುತ್ತಿದ್ದ ಮಳೆಯ ವರ್ಷಧಾರೆ ನೋಡುತ್ತಾ ಕಿಟಕಿಯಲ್ಲಿ ನಿಂತವನಿಗೆ, ನೀನು ಹೆಗಲ ಮೇಲೆ ಹೊದ್ದ ದುಪಟ್ಟ ಆಗೊಮ್ಮೆ-ಈಗೊಮ್ಮೆ ಮುಖಕ್ಕೆ ತಾಕಿದಂತೆ ಇರಚಲು ಎರಚಿದಂತಾಯಿತು.

ನೀನು, ನನ್ನ ಮುಂಜಾವು. ನಿನ್ನ ನೆನಪಿನೊಂದಿಗೆ ಎಚ್ಚರ. ಎದ್ದು ಕುಳಿತರೆ ಅಂಗೈ ಗೆ ಆಗಮಿಸಿ, ಕಣ್ಣ ತನಕ ಸರಿಯುವ, " ಕೌಸಲ್ಯಾ ಸುಪ್ರಜಾ ರಾಮ.." ನೀನು ! ಅಮ್ಮ ತುಳಸಿಗೆ ನೀರು ಹಾಕುವುದನ್ನೇ ನೋಡುತ್ತಾ ನಿಂತವನಿಗೆ , ಆ ಕೃಷ್ಣ ತುಳಸಿಯ ಕೆನ್ನೆಗೆ ಬಿದ್ದ ತುಂತುರು ನೀನು! ಅಪ್ಪನ ಕಾಫಿಯ ಹಬೆಯಲ್ಲಿ, ಸಂಧ್ಯಾವಂದನೆಯ  ಘಳಿಗೆ ಪಂಚ ಪಾತ್ರೆಗೆ ತಗುಲಿದ ಬೆಳ್ಳಿ ಉದ್ಧರಣೆಯ ಖನ್ ಖನ್ ಉಲಿತದಲ್ಲಿ, ದೇವರ ಮುಂದಿಟ್ಟ ಹರಳು ಸಕ್ಕರೆ ಶುಬ್ಬ್ರ ಬೆಳುಪಿನಲ್ಲಿ, ಬಾಗಿಲ ನೆತ್ತಿಗೆ ಅಮ್ಮ ಚುಚ್ಚಿಟ್ಟ ಓದಿನ ಕಡ್ಡಿಯಿಂದೆಳುವ ತಿಳಿ ನೀಲ ಸೋಮಾರಿ ಹೊಗೆಯಲ್ಲಿ, calender ನ ಕೃಷ್ಣ ನ ಹಿಂದೆ ನಿಂತ ಕಾಮಧೇನುವಿಗೆನಾದರು ಜೀವ ಬಂದರೆ ಅದರ  " ಅಂಬಾ...", ಎಲ್ಲದರಲ್ಲೂ ಇರುವವಳು ನೀನೆ ಕಣೆ !!

ಹುಡುಗಿಯರೆಂದರೆ ನನಗೆ ಚಿಕ್ಕಂದಿನಿಂದಲೂ ಒಂದ್ಥರ ಬೆರಗು, ಏನೋ ಅಕ್ಕರೆ, ಸುಮ್ಮ ಸುಮ್ಮನೆ ಇಷ್ಟ. ಬಾಲ್ಯದುದ್ದಕ್ಕೋ ನನ್ನ ಜೊತೆ ಇದ್ದವಳು ನೀನೆ ಕಣೆ. ನಿನ್ನ ಜರಿ ಲಂಗ,ಬಿಗ್ಗ ಬಿಗಿ ಹೇರಲು, ದೊಡ್ಡ ಕಣ್ಣು, ಪುಟ್ಟ ಪಾದ, ನುಣುಪಾದ ಹೊಟ್ಟೆ, ಅಮಾಯಕ ಮುನಿಸು, ಮರೆತುಹೊಗುವಂತ ಸಿಟ್ಟು- ನಾನು ಭೂಮಿಗೆ ಬಂದ ಮೊದಲ ದಿನ ನೀನು ಎಲ್ಲಿದ್ದೆಯೇ  ಹುಡುಗೀ....?

ನಮ್ಮಿಬ್ಬರಿಗೂ ಬದುಕಲಿಕ್ಕೆ ಉಳಿದಿರುವುದು ಕೇವಲ ಎಂಬತ್ತು ವರ್ಷ. ಇವತ್ತಿಗೆ ಇಪ್ಪತ್ತು ನೋಡು ನೋಡುತ್ತಾ ಎಪ್ಪತ್ತಾಗಿಬಿಡುತ್ತದೆ. ಅವತ್ತಿಗೂ ನನ್ನ ಪ್ರೀತಿ ಮುಗಿಯದು. ನಿನ್ನ ಕೆನ್ನೆಯ ಸುಕ್ಕಿನಲ್ಲಿ, ಕನ್ನಡಕದ ಮಂಕಿನಲ್ಲಿ, ಹಳೆಯ ನಲ್ಕೆಳೆಯ ಸರದ ಸವೆದ ಕೊಂಡಿಯಲ್ಲಿ ನಾನಿರುತ್ತೇನೆ; ನಿನ್ನ ಕೊನೆಯ ಉಸಿರಾಟದಲ್ಲಿ !
ನೀನು ಗೋಣು ಚೆಲ್ಲಿ ಮಲಗಿದ ತಾವಿನಲ್ಲಿ ನಾನಿರುತ್ತೇನೆ, ಗೆಳತೀ...!
                     
                                                                                                                                          - ನಿನ್ನವನು.    

No comments: