Thursday, January 21, 2010

ನಾನು, ನಿನ್ನ ಮಾತಿಗೊಮ್ಮೆ ಕವಿತೆ ಸ್ಪುರಿಸದಿರಲು ಏನು ಮಾಡಬೇಕು ಹೇಳು ಸಾಕು!

ಪ್ರೀತಿಯ ಫಲ್ಗುಣಿ,

ಮನೆಗೆ ಬಂದ ಮೇಲೆ ಮನಸಿನಲ್ಲಿ ನಿನ್ನ ಕನಸು ಕದ ಬಿಚ್ಚಿ ಕುಳಿತುಕೊಳ್ಳುತ್ತದೆ. ನಾನು ಮನೆಯ ಮುಂದಿರುವ ಜಗುಲಿಯಲ್ಲಿ ತೆಂಗಿನ ಗರಿಯ ನಡುವಿನ ನಡುವೆ ಇಣುಕುವ ಚಂದಿರನನ್ನು ನೋಡುತ್ತಾ ಮಲಗುತ್ತೇನೆ. ನನ್ನೊಳಗೆ ಕವಿತೆ ಜನಿಸುವ ಸಮಯ.

तेरी यादों में डूबे है हम,
अब सुबह शाम मेरे,
नींद तो जाती रही,
अब मेरे ख्वाब भी...!

ನಿನ್ನ ನೋಡುತ್ತಾ-ನೋಡುತ್ತಾ ನಾನು ಕವಿಯಾಗಿಬಿಟ್ಟೆನಾ ಎಂಬ ಶಂಕೆ ಹಾಗು ಸಣ್ಣ ಭ್ರಮೆ ನನ್ನದು! ಆಫೀಸಿಗೆ ದೀರ್ಘ ರಜೆ ಘೋಷಿಸಿ ಬಂದಿದ್ದೇನೆ. ಇನ್ನು ನಿನ್ನ ಕನಸು ಕಾಣುವ ಕಾಯಕ ನನ್ನದು!

ನನ್ನ ಮನೆಯಿಂದ ತುಸು ದೂರ ನಡೆದರೆ ನಿನ್ನ ಮನೆಯಿದೆ. ನಿನ್ನ ಮನೆಯ ನೆತ್ತಿಯ ಮೇಲೆ ಯಾವುದೋ ಚುಕ್ಕಿ, ನೀನು ನಕ್ಕಂತೆ ಮಿನುಗುತ್ತಿದೆ! ನಿನ್ನ ಮನೆಯ ಹಿಂದೆ ಫಲ್ಗುಣಿ ನದಿ ಹರಿಯುತ್ತದೆ. ನೀನೂ ಅಷ್ಟೆ ಕಣೆ ನದಿಯಂತೆ. ನನ್ನೊಳಗೆ ಮೆಲ್ಲನೆ ಹರಿಯುತ್ತೀಯ, ಗುಪ್ತಗಾಮಿನಿಯಂತೆ! ನನ್ನ ಊರು, ನಿನ್ನ ಮನೆ, ಮನೆಯ ಹಿಂದಿನ ನದಿ ಎಲ್ಲವೂ ನನ್ನ nostalgia ದ ಸಂಕೀರ್ಣದ ಹಾಗೆ ಕಾಣುತ್ತದೆ. ನಿನ್ನ ಮನೆಯ ದೊಡ್ಡ ಉಯ್ಯಾಲೆಯಲ್ಲಿ ನಾವಿಬ್ಬರೂ ಕುಳಿತು ಜೀಕುತ್ತಿದ್ದ ಸುಳಿಗಾಳಿಯಿದೆ, ನನ್ನ ,ಮನೆಯ ಅಂಗಳದಲ್ಲಿ ನೀನಿಟ್ಟ ಪುಟ್ಟ ಹೆಜ್ಜೆಯ ಗುರುತುಗಳಿದೆ. ನಾನು ಪ್ರತಿ ಬಾರಿ ನಗರದಿಂದ ಹಿಂತಿರುಗಿದಾಗಲೂ " ಫಲ್ಗುಣಿನ ಕರೆದುಕೊಂಡು ಬಂದ್ಯಾ..?" ಎಂದು ಅಮ್ಮ ಕೇಳುತ್ತಾರೆ. ಆ ಬಾರಿ ನನ್ನೊಡನೆ ನೀನಿರದ ದುಃಖ ನನಗೂ ಇದೆ. ಆದರೆ ನಾನೇನು ಮಾಡಲಿ? ನಗರದಿಂದ ಯಾವಾಗ ಮುಕ್ತನಾಗಿ ಊರಿಗೆ ಬಂದೇನು ಎಂದು ಮನಸ್ಸು ಚಡಪಡಿಸುತ್ತದೆ. ಊರಿನ ತುಂಬಾ ಚದುರಿದಂತ ಮನೆಗಳು, ಕಿಟಕಿಯ ಒಳಗೆ ಮೆಲ್ಲನೆ ನುಸುಳಿ ಬರುವ ಚಂದಿರ, ಮನೆಯ ಪಕ್ಕದ ಸಂಪಿಗೆ ಮರದ ಕೋಗಿಲೆ, ನಿನ್ನ ಮನೆಯ ಹಿಂದಿನ ನದಿ ತೀರ, ಎಲ್ಲಕ್ಕೂ ಮಿಗಿಲಾಗಿ ದೊರಕುವ ದಟ್ಟ ಏಕಾಂತ. ಏಕಾಂತದಲ್ಲಿ ನಾನು ಮೌನಿ, ನೀನು ಧ್ಯಾನಿ!!

ನಿನ್ನ ಮನೆಯ ಹಿಂದಿರುವ ಫಲ್ಗುಣಿ ನದಿ ತೀರದಲ್ಲಿ ನಮ್ಮ ಸಹಸ್ರ ನೆನಪುಗಳಿವೆ. ಮನಸ್ಸು nostalgic. ಇಲ್ಲೇ ಅಲ್ಲವ ಫಲ್ಗುಣಿ, ನಾವಿಬ್ಬರು ಶಂಕ-ಕಪ್ಪೆ ಚಿಪ್ಪುಗಳನ್ನು ಅರಸುತ್ತ ಕಳೆದದ್ದು, ದಂಡೆಯಲ್ಲಿ ಮರಳು ಗೂಡು ಕಟ್ಟುತ್ತ ಕುಳಿತಿದ್ದು, ಪಕ್ಕದ ಕಾಡಿನ ತುದಿಯಲ್ಲಿ ಸಿಕ್ಕ ನವಿಲುಗರಿಯನ್ನ ಪುಸ್ತಕದೊಳಗೆ ಮರಿಹಾಕಲು ಇರಿಸಿದ್ದು!! ನಮ್ಮ ಬಾಲ್ಯ, ತೀರ ನಿನ್ನೆ-ಮೊನ್ನೆ ಘಟಿಸಿದ ಹಾಗೆ ಭಾಸವಾಗುತ್ತದೆ. ಇನ್ನೆರಡು ದಿನ ಕಳೆದರೆ ಶನಿವಾರ. ನೀನಿಲ್ಲಿ ಪ್ರತ್ಯಕ್ಷಳಾಗುತ್ತೀಯ, ದೇವತಯ ಹಾಗೆ! ನೀನಿಲ್ಲಿ ಬಂದರೆ, ನದಿ ದಂಡೆಯಲ್ಲಿ ಭುಜ ಆನಿಸುತ್ತ ಮಾತನಾಡುತ್ತಿದರೆ, ನಾವು ಸರಿದ ದಾರಿಯೇಷ್ಟೋ, ಸುರಿದ ಮಾತುಗಳೆಷ್ಟೋ? ಸಂಜೆಯಲ್ಲಿ ನದಿಯ ಹರಿವೆ ಬೇರೆ. ನದಿಯ ನೀರಿನಲ್ಲಿ ಕಾಲಿರಿಸಿ ಕುಳಿತರೆ ನಿನ್ನ ಬೆಳ್ಳಿ ಗೆಜ್ಜೆಯ ಪಾದಗಳನ್ನು ಮುದಿಸುವ ಮೀನುಗಳಂತೆ ನಾನೂ ಮೋಹಗೊಳ್ಳುತ್ತೇನೆ. ನಿನ್ನ ಮೊಗದ ಮೇಲಿನ ತಿಳಿ ನೀರ ಪ್ರತಿಫಲನದಲ್ಲಿ, ಹಾಯುವ ಗಾಳಿಯಲ್ಲಿ, you look pretty-pretty! ನಾನು ಪ್ರತಿಬಾರಿಯೂ ನಿನ್ನ ಕಂಡು, ಅಚ್ಚರಿಗೊಂಡು, ಮೋಹಿತಗೊಳ್ಳುವ ಹುಡುಗನಂತೆ ತೊದಲುತ್ತೇನೆ. ಸುಮ್ಮನೆ ಇಳಿ ಬಿಟ್ಟ ನಿನ್ನ ಕೂದಲು ಆ ರೇಷ್ಮೆಯ ಕೆನ್ನೆಯ ಮೇಲೆ ಫಳ್ಳನೆ ಹೊಳೆಯುತ್ತದೆ. ನೀವು ಹುಡುಗಿಯರು ಏನು ಮಾಡಿದರೂ ಚೆಂದ ಕಾಣುತ್ತೀರಲ್ಲೇ? ನಾವಿಲ್ಲಿ ಹುಡುಗರು ಚೆಂದ ಕಾಣಲು ಏನೆಲ್ಲಾ ಮಾಡುತ್ತೇವೆ! ನಿನ್ನ ಕಿವಿಯ ಚಿನ್ನದ ಒಲೆಗಳು, ಮೂಗಿನ ಸಣ್ಣ ಮೂಗುತಿ, ಬಿಂದಿಯ ಕೆಳಗಿನ ದೇವರ ಕುಂಕುಮ, ನೀನು ನಕ್ಕಾಗ ತುಟಿಯ ಚಿಕ್ಕ ರೇಖು, ನಿನ್ನ ನೀಳ ಸಣ್ಣ ಬೆರಳು, ಆಗೊಮ್ಮೆ-ಈಗೊಮ್ಮೆ ತಂಗಾಳಿಗೆ ತಾಕುವ ನಿನ್ನ ಸೆರಗು, ನಿನ್ನ ನೀಲ ಕಣ್ಣು! You are irresistibly Beautiful ಕಣೆ! ನಾನು, ನಿನ್ನ ಮಾತಿಗೊಮ್ಮೆ ಕವಿತೆ ಸ್ಪುರಿಸದಿರಲು ಏನು ಮಾಡಬೇಕು ಹೇಳು ಸಾಕು!

ನೀನು ಬಂದ ಮೇಲೆ ಇದ್ದೆ ಇದೆ ಗೆಳತಿ, ನೀಲಧಿಯ ಚಂದ್ರ, ನಿನ್ನ ನೀಲಿ ಕಣ್ಣು, ತೇಲುವ ಚುಕ್ಕಿ, ನನ್ನ ಪ್ರೀತಿ, ಸ್ಪುರಿಸುವ ಕವಿತೆ, ನೀರಿನೊಳಗಣ ನಿನ್ನ ಬೆಳ್ಳಿ ಗೆಜ್ಜೆ, ಬೆರಗುಗೊಳ್ಳುವ ನನ್ನ ಮೋಹದ ಪರಿ! ನಿನ್ನೊಡನೆ ಮಾತನಾಡಲು ನೂರು ಮಾತಿದೆ ಗೆಳೆತಿ. ಅವೆಲ್ಲಾ ಎಲ್ಲಿ ಬರೆಯಲಿ, ಹೇಗೆ ಹೇಳಲಿ...?

-ನಿನ್ನವನು.